

ಹನೂರು: ಮಾದಕ ವಸ್ತು ಹಾಗೂ ಮದ್ಯ ಮಾರಾಟದಿಂದ ಬಹಳಷ್ಟು ಜನರು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಇದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಒತ್ತಾಯಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಸಾಲೂರು ಬೃಹನ್ಮಠ, ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಜನಜಾಗೃತಿ ವೇದಿಕೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಾಂಧಿ ಸ್ಮತಿ ಜನಜಾಗೃತಿ ಜಾಥಾ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದು ಸ್ವಾಸ್ಥೃ ಸಮಾಜಕ್ಕೆ ಮಾರಕವಾಗಿದೆ. ಇದರಿಂದ ಅವಲಂಬಿತರು ಬದುಕಿನಲ್ಲಿ ಸಂಕಷ್ಟವನ್ನು ಎದುರಿಸುವಂತಾಗಿದೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡುವ ಸಲುವಾಗಿ, ದುಶ್ಚಟಗಳಿಗೆ ಒಳಗಾದವರ ಬದುಕನ್ನು ರೂಪಿಸಲು ಹಾಗೂ ಉತ್ತಮ ಸಮಾಜವನ್ನು ನಿರ್ಮಿಸಲು ಸಂಘ ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಡಿತ ಬಿಡಿಸುವ ಶಿಬಿರವನ್ನು ಆಯೋಜಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಜತೆಗೆ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ. ಡಾ. ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆ ಹಾಗೂ ದೂರದೃಷ್ಟಿ ಉತ್ತಮ ಸಮಾಜಕ್ಕೆ ಮಾದರಿಯಾಗಿದೆ. ಹಾಗಾಗಿ ಸಂಸ್ಥೆಯ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಮಾದಪ್ಪನ ಸನ್ನಿಧಿಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಆದ್ದರಿಂದ ನವಜೀವನ ಸದಸ್ಯರು ಮದ್ಯ ಸೇವನೆಯನ್ನು ತ್ಯಜಿಸುವುದರ ಮೂಲಕ ಜೀವನದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು. ಹಾಗೆಯೇ ಜನರು ದುಶ್ಚಟಗಳಿಗೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ಗಮನಹರಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಚಾಮುಲ್ ನಿರ್ದೇಶಕ ಮಹದೇವಸ್ವಾಮಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾದೇಶಿಕ ಯೋಜನಾಧಿಕಾರಿ ಮಾಧವ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಯೋಜನಾಧಿಕಾರಿಗಳಾದ ಹನೂರಿನ ಪ್ರವೀಣ್‌ಕುಮಾರ್, ಚಾ.ನಗರದ ಹರೀಶ್‌ಕುಮಾರ್, ಜನಜಾಗೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ್, ಅಧ್ಯಕ್ಷ ರವಿಶಂಕರ್, ಉಪಾಧ್ಯಕ್ಷ ಪ್ರಸಾದ್, ಮುಖಂಡರಾದ ವಿಜಯಕುಮಾರ್, ಶಿವರಾಮು ಹಾಗೂ ಇನ್ನಿತರರಿದ್ದರು.