

ಹನೂರು: ಮೂರು ದಶಕಗಳ ಹಿಂದೆ ಚಪ್ಪರದ ಮಳಿಗೆಯಲ್ಲಿ ಪ್ರಾರಂಭವಾದ ಸಿರಗೋಡು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇಗುಲಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿದ್ದು, ತಾಲೂಕಿನಲ್ಲಿ ಪ್ರಸಿದ್ಧಿ ಪಡೆದಿದೆ.
ಹನೂರು ತಾಲೂಕಿನ ಸಿರಗೋಡು ಗ್ರಾಮದಲ್ಲಿ 1984ರಲ್ಲಿ ಚಪ್ಪರದ ಮಳಿಗೆಯಲ್ಲಿ ಪ್ರಾರಂಭವಾದ ಈ ದೇಗುಲದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ನೆರವಿನಿಂದ ಗುಡಿಯನ್ನು ಕಟ್ಟಿಸಲಾಗಿದೆ. ಇಲ್ಲಿ ನವಗ್ರಹ ಮಂಟಪವನ್ನು ಸ್ಥಾಪಿಸಲಾಗಿದ್ದು, ವಿವಿಧ ವಿಗ್ರಹ ಮೂರ್ತಿಯನ್ನು ಒಳಗೊಂಡಿದೆ. ಪ್ರಸ್ತುತ ರಾಮಕೃಷ್ಣ ಎಂಬುವರು ಅರ್ಚಕರಾಗಿದ್ದಾರೆ. ದೇಗುಲದಲ್ಲಿ ಪ್ರತಿ ಶನಿವಾರ, ಸೋಮವಾರ, ವೈಕುಂಠ ಏಕಾದಶಿ ಹಾಗೂ ಶ್ರಾವಣ ಮಾಸದ ಶನಿವಾರಗಳಂದು ವಿಶೇಷ ಪೂಜೆ ನಡೆಯುತ್ತದೆ. ಮಾರ್ಚ್ ತಿಂಗಳಲ್ಲಿ 3 ದಿನಗಳ ಕಾಲ ಜಾತ್ರೋತ್ಸವ ನೆರವೇರಲಿದ್ದು, ರಥೋತ್ಸವವು ಜರುಗಲಿದೆ. ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿ ಇಷ್ಟಾರ್ಥ ಸಿದ್ಧಿಗೆ ಬೇಡುತ್ತಾರೆ.
ಭಕ್ತರ ನಂಬಿಕೆ: ಈ ದೇವರಿಗೆ ಹರಕೆ ಹೊತ್ತರೆ ಮಕ್ಕಳಾಗದಿರುವುದು, ಮದುವೆಯಾಗದಿರುವುದು, ಜಮೀನಿನ ಸಮಸ್ಯೆ, ಕೃಷಿಯಲ್ಲಿ ನಷ್ಟ ಇನ್ನಿತರ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದ್ದು, ಇಲ್ಲಿಗೆ ಭೇಟಿ ನೀಡುವ ಭಕ್ತರ ಕಷ್ಟಕಾರ್ಪಣ್ಯಗಳು ಪರಿಹಾರವಾಗಿವೆ. ಈ ದಿಸೆಯಲ್ಲಿ ತಾಲೂಕಿನ ಭಕ್ತರು ಮಾತ್ರವಲ್ಲದೇ ತಮಿಳುನಾಡಿನ ಬಣ್ಣಾರಿ, ಸತ್ತಿ, ಬೆಂಗಳೂರು, ಮೈಸೂರು ಹಾಗೂ ಇನ್ನಿತರ ದೂರದ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ತಿರುಪತಿಯಿಂದ ತಂದ ವಿಗ್ರಹ: ಈ ಹಿಂದೆ ಚಪ್ಪರದ ಮಳಿಗೆಯಲ್ಲಿ ನಾರಾಯಣಸ್ವಾಮಿಯ ಭಾವಚಿತ್ರವನ್ನು ಇಟ್ಟು ಪೂಜಿಸಲಾಗುತ್ತಿತ್ತು. ಭಕ್ತರು ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸುವ ಆಶಯ ಹೊಂದಿದ್ದರು. ಈ ದಿಸೆಯಲ್ಲಿ ತಿರುಪತಿಯ ಭಕ್ತರೊಬ್ಬರೂ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಮೂರ್ತಿಯನ್ನು ಕೊಡುಗೆಯಾಗಿ ನೀಡಿದರು. ಬಳಿಕ ದೇಗುಲವನ್ನು ಜೀರ್ಣೋದ್ಧಾರ ಮಾಡಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಈ ದೇಗುಲ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇಗುಲ ಎಂದು ಖ್ಯಾತಿ ಪಡೆಯಿತು. ಕಾಲಾನಂತರದಲ್ಲಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೀಡಿ ಕಟ್ಟಡ ನಿರ್ಮಾಣಕ್ಕೂ ಸಹಾಯಹಸ್ತ ನೀಡಿದರು. ಜತೆಗೆ ಪ್ರತಿ ಶನಿವಾರ ದಾಸೋಹ ವ್ಯವಸ್ಥೆಯೂ ಆರಂಭಿಸಲಾಯಿತು. ದಾಸೋಹಕ್ಕೆ ಭಕ್ತರು ದವಸ ಧಾನ್ಯವನ್ನು ನೀಡುತ್ತಾ ಬಂದಿದ್ದಾರೆ. ಭಕ್ತರಿಂದಲೇ ನಿರ್ಮಿಸಿದ ಈ ದೇಗುಲ ಭಕ್ತರಿಂದಲೇ ಅಭಿವೃದ್ಧಿ ಹೊಂದುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಪ್ರಸಿದ್ಧಿ ಪಡೆಯುತ್ತಿದೆ.
ಭಕ್ತರೇ ನಿರ್ಮಿಸಿದ ಈ ದೇಗುಲದಲ್ಲಿ ನಮ್ಮ ಕುಟುಂಬಸ್ಥರು ದೇಗುಲದಲ್ಲಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. 7 ಸದಸ್ಯರನ್ನೊಳಗೊಂಡ ಧರ್ಮದರ್ಶಿ ಮಂಡಳಿ ರಚಿಸಲಾಗಿದೆ. ಇತ್ತೀಚೆಗೆ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ದಾಸೋಹಕ್ಕೆ ಹಾಗೂ ದೇಗುಲದ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆ.ರಾಮಕೃಷ್ಣ ದೇಗುಲದ ಅರ್ಚಕ ನಾನು ಎರಡೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು ಮೊದಲು ನೀರಾವರಿಗೆ ಬೋರ್ ಕೊರೆಸಿದೆ. ಆದರೆ ವಿಫಲವಾಯಿತು. ಬಳಿಕ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿಕೊಂಡೆ. ಬಳಿಕ ಕೊರೆಯಿಸಿದ ಬೋರ್‌ನಲ್ಲಿ 290 ಅಡಿಗೆ ಚೆನ್ನಾಗಿ ನೀರು ಬಂತು. ಇದೀಗ ಉತ್ತಮವಾಗಿ ಕೃಷಿ ಮಾಡುತ್ತಿದ್ದೇನೆ.ಮಹದೇವಶೆಟ್ಟಿ, ಬೆಳತ್ತೂರು ಗ್ರಾಮದ ಭಕ್ತ