ಹನೂರಿನಲ್ಲಿ ನ್ಯಾಯಾಲಯ ಕಾರ್ಯಾರಂಭ

27 HANUR 1
Published on

ಹನೂರು: ಈ ಭಾಗದ ಜನರ ಹಲವು ವರ್ಷಗಳ ಕನಸಾಗಿದ್ದ ನ್ಯಾಯಾಲಯ ಸ್ಥಾಪನೆ ಶನಿವಾರ ಹನೂರಿನಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಂದ ಉದ್ಘಾಟನೆಯಾಗುವುದರ ಮೂಲಕ ನನಸಾಗಿಸಿದೆ. ಸಾರ್ವಜನಿಕರಲ್ಲಿ ಸಂತಸವನ್ನು ಉಂಟು ಮಾಡಿದೆ.

ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಮಾತನಾಡಿ, ನ್ಯಾಯಾಂಗದ ಸೇವೆಯನ್ನು ಮನೆ ಬಾಗಿಲಿಗೆ ಒದಗಿಸುವುದು ಸರ್ಕಾರದ ಧ್ಯೇಯ. ಈ ದಿಸೆಯಲ್ಲಿ ಹನೂರಿನಲ್ಲಿ ನ್ಯಾಯಾಲಯ ಉದ್ಘಾಟನೆಯಾಗಿರುವುದು ಸುದಿನವಾಗಿದೆ. 5 ವರ್ಷದಿಂದ ಸಂದಬೇಕಾದ ಕಾಲ ಈಗ ಕೂಡಿ ಬಂದಿದೆ. ಈ ಸಂಚಾರ ನ್ಯಾಯಾಲಯವು ವಾರದಲ್ಲಿ 4 ದಿನ ಕಾರ್ಯನಿರ್ವಹಿಸಲಿದೆ ಎಂದರು.

ನ್ಯಾಯಾಲಯಕ್ಕೆ ಕಟ್ಟಡ, ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾದ ಬಳಿಕ ಉತ್ತಮ ಸೌಕರ್ಯ ದೊರಕಲಿದೆ ಎಂದು ತಿಳಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ನ್ಯಾಯಾಲಯದ ಸ್ಥಾಪನೆಯ ಉದ್ದೇಶ ನ್ಯಾಯ ದೊರಕಿಸಿ ಕೊಡುವುದಾಗಿದೆ. ಇದರಲ್ಲಿ ಕಕ್ಷಿದಾರ ಮತ್ತು ವಕೀಲರ ಸಹಕಾರ ಅತ್ಯಗತ್ಯ. ನ್ಯಾಯಾಧೀಶರು ಹಾಗೂ ವಕೀಲರು ಒಂದು ರಥದ 2 ಚಕ್ರಗಳಂತೆ. ಇವೆರಡರಲ್ಲಿ ಸಮಸ್ಯೆ ಉಂಟಾದರೆ ನ್ಯಾಯಪರತೀರ್ಪನ್ನು ನೀಡಲು ತೊಡಕಾಗಲಿದೆ. ಈ ಬಗ್ಗೆ ಮನದಟ್ಟು ಮಾಡಿಕೊಂಡು ಕಕ್ಷಿದಾರನಿಗೆ ನ್ಯಾಯವನ್ನು ಒದಗಿಸಬೇಕು ಎಂದರು.

ಬೆಂಗಳೂರಿನಿಂದ ಆಗಮಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್, ಹೈಕೋರ್ಟ್ ಮತ್ತು ಚಾ.ನಗರ ಆಡಳಿತಾತ್ಮಕ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ, ಕೊಳ್ಳೇಗಾಲದ ಪ್ರಧಾನ ನ್ಯಾಯಾಧೀಶೆ ನಂದಿನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಸ್ ಬಸವರಾಜು, ಕಾರ್ಯದರ್ಶಿ ಎಂ. ಮೋಹನ್‌ಕುಮಾರ್ ಇತರರ ಸಮ್ಮುಖದಲ್ಲಿ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿಎಂಎಫ್‌ಸಿ ಸಂಚಾರಿ ನ್ಯಾಯಾಲಯದ ಉದ್ಘಾಟನೆಯನ್ನು ನೆರವೇರಿಸಲಾಯಿತು.ನ್ಯಾಯಾಧೀಶರಾದ ರಘು, ನಿಶಾರಾಣಿ, ವಕೀಲರಾದ ಶ್ರೀಧರ್, ಆನಂದ್, ರಾಧಕೃಷ್ಣ, ನಾಗರಾಜು, ಪ್ರಕಾಶ್, ತಹಸೀಲ್ದಾರ್ ಗುರುಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net