

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದಿಂದ ತೆಳ್ಳನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ 4 ತಿಂಗಳು ಕಳೆದಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ.
ತಾಲೂಕು ಕೇಂದ್ರದಿಂದ 10 ಕಿಮೀ ಅಂತರ ಹೊಂದಿರುವ ಬಂಡಳ್ಳಿ ಗ್ರಾಮದಿಂದ ತೆಳ್ಳನೂರು ಗ್ರಾಮವು 7 ಕಿಮೀ ದೂರ ಇದೆ. ಈ ಮಾರ್ಗದ ರಸ್ತೆಯು ಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ತೆಳ್ಳನೂರು, ಕೊತ್ತನೂರು, ಬಾಳಗುಣಸೆ, ಚಿಕ್ಕಲ್ಲೂರು ಹಾಗೂ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಆದರೆ ಈ ರಸ್ತೆಗೆ ಡಾಂಬರು ಹಾಕಿ 20 ವರ್ಷಗಳೇ ಕಳೆದಿತ್ತು. ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಕೆಲವು ಕಡೆಗಳಲ್ಲಿ ಡಾಂಬರು ಸಂಪೂರ್ಣ ಕಿತ್ತು ಬಂದು, ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿತ್ತು. ಮಳೆಗಾಲದಲ್ಲಂತೂ ಈ ರಸ್ತೆ ಯ ದುಸ್ಥಿತಿ ಹೇಳತೀರದಾಗಿತ್ತು. ಇದರಿಂದ ವಾಹನ ಸಂಚರಿಸಲು ನರಕಯಾತನೆ ಅನುಭವಿಸುವಂತಾಗಿತ್ತು. ಬೈಕ್ ಸವಾರರು ಸಂಚರಿಸಲು ಪಡಬಾರದ ಕಷ್ಟಪಡುತ್ತಿದ್ದರು. ಈಗ ರಸ್ತೆ ಕಾಮಗಾರಿ ಆರಂಭವಾಗಿದೆಯಾರೂ ಮಂದಗತಿಯಲ್ಲಿ ಸಾಗಿದೆ.
ಈ ರಸ್ತೆಯು ಕಾವೇರಿ ವನ್ಯಜೀವಿ ವಲಯದ ನಡುವೆ ಹಾದುಹೋಗಿದ್ದು, ಆನೆ, ಜಿಂಕೆ, ಹಂದಿ, ಇತರ ಕಾಡು ಪ್ರಾಣಿಗಳು ರಸ್ತೆಗೆ ಬಂದು ನಿಲ್ಲುತ್ತವೆ. ಇದರಿಂದ ಹದಗೆಟ್ಟಿರುವ ಈ ರಸ್ತೆಯಲ್ಲಿ ಬೈಕ್ ಸವಾರರು ಜೀವಭಯದಿಂದ ಸಂಚರಿಸಬೇಕಾದ ಸ್ಥಿತಿ ಇತ್ತು. ಒಂದು ವೇಳೆ ಬೈಕ್ ಪಂಕ್ಚರ್ ಅಥವಾ ಇನ್ನಿತರೆ ಕಾರಣಗಳಿಂದ ಕೈ ಕೊಟ್ಟರೆ ಕಾಡು ಪ್ರಾಣಿಗಳ ಭಯದಿಂದ ಬೈಕ್ ಅಲ್ಲಿಯೇ ಬಿಟ್ಟು ಬರಬೇಕಾದ ಸ್ಥಿತಿ ಇತ್ತು. ಇತ್ತ ಹಾಳಾಗಿರುವ ಈ ರಸ್ತೆಯಲ್ಲಿ ಗುಂಡಿ ಹಾಗೂ ಜಲ್ಲಿಕಲ್ಲುಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಗಾಗ್ಗೆ ಆಯತಪ್ಪಿ ಬಿದ್ದು, ಗಾಯಗೊಳ್ಳುತ್ತಿದ್ದರು. ಇದರಿಂದ ಈ ಮಾರ್ಗದಲ್ಲಿ ಸಂಚಾರ ಹರಸಾಹಸವಾಗಿತ್ತು.
ಬಸ್ ಸಂಚಾರ ಸ್ಥಗಿತ: ಹನೂರಿನಿಂದ ಬಂಡಳ್ಳಿ, ತೆಳ್ಳನೂರು, ಕೊತ್ತನೂರು, ಚಿಕ್ಕಲ್ಲೂರು ಹಾಗೂ ಕೊಳ್ಳೇಗಾಲಕ್ಕೆ ಈ ಮಾರ್ಗದಲ್ಲಿ ಹಿಂದೆ ಕೆಲ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ರಸ್ತೆಯು ತೀರ ಹದಗೆಟ್ಟ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿದೆ. ಪರಿಣಾಮ ಕೆಲವರು ಬೈಕ್‌ನಲ್ಲಿ ಸಂಚರಿಸಿದರೆ ಇನ್ನು ಕೆಲವರು ಆಟೋಗಳ ಮೂಲಕ ಹೆಚ್ಚಿನ ಹಣ ತೆತ್ತು ಸಂಚರಿಸಬೇಕಾದ ಪರಿಸ್ಥಿತಿ ಇದೆ.
ಜತೆಗೆ ಪ್ರತಿವರ್ಷ ಚಿಕ್ಕಲ್ಲೂರಿನಲ್ಲಿ ವಿಜೃಂಭಣೆಯಿಂದ 4 ದಿನಗಳ ಕಾಲಜಾತ್ರೆ ನಡೆಯುತ್ತದೆ. ಈ ವೇಳೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಆದರೆ ಈ ರಸ್ತೆಯು ಹದಗೆಟ್ಟಿದ್ದರಿಂದ ಈ ಭಾಗದ ಭಕ್ತರು ದೊಡ್ಡಿಂದುವಾಡಿ ಗ್ರಾಮದ ಮೂಲಕ ಸುತ್ತಿ ಬಳಸಿ ಚಿಕ್ಕಲ್ಲೂರಿಗೆ ತಲುಪಬೇಕಿದ್ದು, ತುಂಬಾ ತೊಂದರೆ ಪಡುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಎರಡು ಬಾರಿ ವಾಪಸಾಗಿದ್ದ ಅನುದಾನ:
ರಸ್ತೆ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಹಿಂದಿನ ಶಾಸಕ ಆರ್.ನರೇಂದ್ರ ಅವರು ರಸ್ತೆ ಅಭಿವೃದ್ಧಿಪಡಿಸಲು ಅಗತ್ಯ ಕ್ರಮವಹಿಸಿ 2013ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಸಿಆರ್‌ಎಫ್ ಯೋಜನೆಯಡಿ ಅನುದಾನ ತಂದಿದ್ದರು. ಆದರೆ ರಸ್ತೆ ಅಭಿವೃದ್ಧಿ ಕೈಗೊಳ್ಳಲು ಅರಣ್ಯ ಇಲಾಖೆಯ ನಿಯಮ ಅಡ್ಡಿಯಾಗಿತ್ತು. ಇದರಿಂದ ಅನುದಾನ ಸರ್ಕಾರಕ್ಕೆ ವಾಪಸಾಯಿತು. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಆದರೆ ಟೆಂಡರ್‌ಗೆ ಯಾರೊಬ್ಬರೂ ಅರ್ಜಿ ಹಾಕಲಿಲ್ಲ. ಹಾಗಾಗಿ ಅನುದಾನ ಮತ್ತ ವಾಪಸಾಯಿತು.
ಮಂದಗತಿಯಲ್ಲಿ ಕಾಮಗಾರಿ:
ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಸಿಗಲಿಲ್ಲ. ಬದಲಾಗಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಕ್ಷೇತ್ರದ ಅಭಿವೃದ್ಧಿಗೆ ದೊರೆತ 25 ಕೋಟಿ ರೂ. ಅನುದಾನದಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಅಂದಿನ ಶಾಸಕ ಆರ್.ನರೇಂದ್ರ ಭೂಮಿಪೂಜೆ ನೆರವೇರಿಸಿದ್ದರು.
ಪ್ರಾರಂಭದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನಷ್ಟೇ ಪ್ರಾರಂಭಿಸಲಾಗಿತ್ತು. ಬಳಿಕ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದ್ದು, ಪ್ರಗತಿಯಲ್ಲಿದೆ. ರಸ್ತೆಯನ್ನು ಬರೀ ಸಮತಟ್ಟು ಮಾಡಿ ಕೆಲವೆಡೆ ಜಲ್ಲಿಕಲ್ಲುಗಳನ್ನು ಹಾಕಲಾಗಿದೆ. ಆದರೆ ಹದ ಮಾಡಿಲ್ಲ. ಜತೆಗೆ ಅರಣ್ಯದೊಳಗೆ ಹಾದು ಹೋಗಿರುವ ರಸ್ತೆಯಲ್ಲಿ ಮಣ್ಣನ್ನು ಬದಿಗೆ ಹಾಕಲಾಗಿದೆ. ಇದರಿಂದ 4 ತಿಂಗಳು ಕಳೆದರೂ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಬಸ್ ಸೌಕರ್ಯಕ್ಕೆ ಒತ್ತಾಯ:
ಹಿಂದೆ ಈ ಮಾರ್ಗದಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಕಳೆದ ಐದಾರು ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಕೆಲಸ ಕಾರ್ಯಗಳ ನಿಮಿತ್ತ ತೆಳ್ಳನೂರು ಭಾಗದ ಜನರು ಬಂಡಳ್ಳಿ ಹಾಗೂ ಹನೂರಿಗೆ ತೆರಳಬೇಕಾದರೆ ಈ ಮಾರ್ಗವಾಗಿ ಹೆಚ್ಚಾಗಿ ಬೈಕ್ ಇಲ್ಲವೇ ಆಟೋದ ಮೂಲಕ ಸಂಚರಿಸಬೇಕಿದೆ. ಆದ್ದರಿಂದ ಸಂಬಂಧಪಟ್ಟವರು ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಜತೆಗೆ ಬಸ್ ಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ 4 ತಿಂಗಳು ಕಳೆದಿದ್ದು, ರಸ್ತೆಗೆ ಜಲ್ಲಿಕಲ್ಲುಗಳನ್ನು ಹಾಕಲಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಸಂಚರಿಸಲು ತುಂಬಾ ತೊಂದರೆಯಾಗಿದೆ. ಅದ್ದರಿಂದ ಶೀಘ್ರ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.-ವೆಂಕಟರಾಜು, ತೆಳ್ಳನೂರು ಗ್ರಾಮಸ್ಥ. ಅರಣ್ಯ ಇಲಾಖೆಯ ಕೆಲವು ತೊಡಕುಗಳಿಂದ ರಸ್ತೆ ಕಾಮಗಾರಿ ವಿಳಂಬವಾಗಿತ್ತು. ಇದೀಗ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಮೂರ‌್ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.-ಸುರೇಂದ್ರ, ಎಇ ಪಿಡಬ್ಲುೃಡಿ ಇಲಾಖೆ ಕೊಳ್ಳೇಗಾಲ.