

ಹನೂರು: ಸಾಮಾಜಿಕ ಆಂದೋಲನಕ್ಕೆ ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರ. ಇವರ ಕಾಯಕ ನಿಷ್ಠೆ ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಬಸವನ ಬಾಗೇವಾಡಿ ಸಮೀಪದ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣ, ಬಸವಣ್ಣನವರಿಗೆ ತಾಂಬೂಲ ತಯಾರು ಮಾಡುವ ಕಾಯಕವನ್ನು ನಿರ್ವಹಿಸುತ್ತಿದ್ದರು. ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದರು. 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. 250ಕ್ಕೂ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಗುರುಪ್ರಸಾದ್ ಹೇಳಿದರು.