ಪುಂಡರ ಅಡ್ಡೆಯಾಗಿರುವ ತಂಗುದಾಣ

oppo_2
oppo_2
Published on

ಸಮಸ್ಯೆ ಬಗೆಹರಿಸಲು ನಾಗರಿಕರ ಆಗ್ರಹ
ಹನೂರು: ತಾಲೂಕಿನ ಚಿಕ್ಕಮಾಲಾಪುರ ಗ್ರಾಮಕ್ಕೆ ತೆರಳುವ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ ತಂಗುದಾಣವು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಈ ಸಮಸ್ಯೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಿಕ್ಕಮಾಲಾಪುರ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ. ಹಾಗಾಗಿ ಇಲ್ಲಿನ ಜನರು ಹನೂರು ಹಾಗೂ ಲೊಕ್ಕನಹಳ್ಳಿ ಕಡೆಗೆ ತೆರಳಬೇಕಾದರೆ ಮುಖ್ಯ ರಸ್ತೆಗೆ ಆಗಮಿಸಬೇಕು. ಆದರೆ ಇಲ್ಲಿ ಬಸ್ ತಂಗುದಾಣ ಇರಲಿಲ್ಲ. ಇದರಿಂದ ಬಸ್ಸಿಗಾಗಿ ಕಾದು ಮಳೆ, ಬಿಸಿಲಲ್ಲೇ ನಿಲ್ಲುವಂತಾಗಿತ್ತು. ಮಳೆ ಬಂದ ವೇಳೆ ತುಂಬ ತೊಂದರೆ ಅನುಭವಿಸುವಂತಾಗಿತ್ತು. ಇದರಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಯ ಬಳಿ ಕಳೆದ ದಶಕದ ಹಿಂದೆ ತಂಗುದಾಣವನ್ನು ನಿರ್ಮಿಸಲಾಯಿತು. ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಇದು ಬಸ್ ನಿರೀಕ್ಷೆ ಮಾಡಲು ಅನುಕೂಲವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಈ ತಂಗುದಾಣವನ್ನು ಕುಡುಕರ ಅಡ್ಡೆಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಬೆಳಗಿನ ವೇಳೆಯೂ ಕೆಲವರು ಮದ್ಯ ಸೇವನೆ ಮಾಡುತ್ತಿದ್ದಾರೆ. ಕುಡಿದ ಮದ್ಯದ ಬಾಟಲಿ, ಪೌಚ್ ಹಾಗೂ ಬೀಡಿ ಸಿಗರೇಟ್‌ಗಳ ತುಂಡುಗಳನ್ನು ಇಲ್ಲಿಯೇ ಬಿಸಾಡುತ್ತಿದ್ದಾರೆ. ಮಲ, ಮೂತ್ರವನ್ನು ವಿಸರ್ಜಿಸಲಾಗುತ್ತಿದೆ. ತಿಂಡಿ, ತಿನಿಸುಗಳ ಪೇಪರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ರಾಶಿ ಹಾಕಲಾಗುತ್ತಿದೆ. ಇದರಿಂದ ತಂಗುದಾಣದಲ್ಲಿ ವಿಪರೀತ ಅನೈರ್ಮಲ್ಯ ಉಂಟಾಗಿದೆ. ದುವಾರ್ಸನೆ ಬೀರುತ್ತಿದೆ. ಇದರಿಂದ ಜನರು ತಂಗುದಾಣದಲ್ಲಿ ನಿಲ್ಲಲು ಸಾಧ್ಯವಿಲ್ಲದಂತಾಗಿದೆ.
ರಸ್ತೆ ಬದಿ ಹಾಗೂ ಮರದ ನೆರಳಿನಲ್ಲಿ ಬಸ್ಸಿಗಾಗಿ ಕಾಯುವಂತಾಗಿದೆ. ಇದರಿಂದ ಗ್ರಾಮಸ್ಥರು ಅದರಲ್ಲೂ ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಮಳೆ ಬಂದ ವೇಳೆ ಅನುಭವಿಸುವ ಕಷ್ಟ ಹೇಳತೀರದಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಂಗುದಾಣದಲ್ಲಿ ಕುಡುಕರ ಹಾವಳಿಗೆ ಕಡಿವಾಣ ಹಾಕುವುದರ ಜತೆಗೆ ಸ್ವಚ್ಛಗೊಳಿಸಿ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net