ಸಿದ್ದಪ್ಪಾಜಿ ಜಾತ್ರೆಗೆ ಪ್ರತ್ಯೇಕ ಬಸ್ ಕಲ್ಪಿಸಿ- ಭಕ್ತರ  ಒತ್ತಾಯ

Bus
Published on

ಹನೂರು : ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆ ಜ. 13 ರಿಂದ ಆರಂಭವಾಗಿ 5 ದಿನಗಳ ಕಾಲ ನಡೆಯುಲಿದೆ. ಈ ಸಂದರ್ಭ ಹನೂರಿನಿಂದ ಚಿಕ್ಕಲ್ಲೂರಿಗೆ ಪ್ರತ್ಯೇಕ ಬಸ್ ಸೌಕರ್ಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಧಾರ್ಮಿಕ ಆಚರಣೆಯನ್ನು ಸಾರುವ ಈ ಜಾತ್ರೆಯಲ್ಲಿ ಚಂದ್ರ ಮಂಡಲೋತ್ಸವ, ಹುಲಿ ವಾಹನೋತ್ಸವ,

ಮುಡಿಸೇವೆ ಇತ್ಯಾದಿ ನೆರವೇರಲಿದೆ. ಈ ಜಾತ್ರೆಯಲ್ಲಿ ಪ್ರತಿ ವರ್ಷವೂ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರೆ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ತಾಲೂಕು ಕೇಂದ್ರ ಹನೂರಿನಿಂದಲೂ ಬಂಡಳ್ಳಿ ಮಾರ್ಗವಾಗಿ ಚಿಕ್ಕಲ್ಲೂರಿಗೆ ಬಸ್ ಸೌಕರ್ಯ ಕಲ್ಪಿಸಿದರೆ

ಈ ಭಾಗದ ಒಡೆಯರಪಾಳ್ಯ, ಮಾರ್ಟಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ, ಕೌದಳ್ಳಿ, ರಾಮಾಪುರ, ಕುರಟ್ಟಿಹೊಸೂರು ಇನ್ನಿತರ ಗ್ರಾಮಗಳಿಂದ ಹೆಚ್ಚಿನ ಭಕ್ತರು ತೆರಳುತ್ತಾರೆ. ಆದರೆ ಹನೂರಿನಿಂದ ಪ್ರತಿ ವರ್ಷವೂ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಬಹುತೇಕ ಭಕ್ತರು ದೊಡ್ಡಿಂದುವಾಡಿ ಮಾರ್ಗವಾಗಿ ಸುತ್ತಿ ಬಳಸಿ ಚಿಕ್ಕಲ್ಲೂರಿಗೆ ತೆರಳುತ್ತಾರೆ. ಕೆಲ ಭಕ್ತರು ಬಂಡಳ್ಳಿ ಮಾರ್ಗವಾಗಿ ಆಟೋ ಹಾಗೂ ಗೂಡ್ಸ್ ವಾಹನಗಳ ಮೂಲಕ ತೆರಳಬೇಕಿದೆ. ಇದರಿಂದ ಜನ ತೊಂದರೆ ಪಡುವಂತಾಗಿದೆ. ಬಸ್ ಸೌಕರ್ಯವನ್ನು ಒದಗಿಸುವಂತೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಲ್ಲಿ ಪ್ರತಿ ವರ್ಷ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ವರ್ಷದಿಂದಾದರೂ ಹನೂರಿನಿಂದ ಚಿಕ್ಕಲ್ಲೂರಿಗೆ ಪ್ರತ್ಯೇಕ ಬಸ್ ಸೌಕರ್ಯ ಒದಗಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net