

ಹನುಮಸಾಗರ: ಯುವಕರ ದೈಹಿಕ ಸದೃಢತೆಗಾಗಿ ಗ್ರಾಮದಲ್ಲಿ ಒಂದು ಸುಸಜ್ಜಿತ ಆಟದ ಮೈದಾನ ನಿರ್ಮಾಣ ಮಾಡಲು ಗ್ರಾಪಂ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯ ಸಂಗಪ್ಪ ಕರಂಡಿ ಹೇಳಿದರು.
ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ಯುವ ಸಪ್ತಾಹ ಕಾರ್ಯಕ್ರಮ ಮತ್ತು ಯುವ ಗ್ರಾಮ ಸಭೆಯಲ್ಲಿ ಮಾತನಾಡಿದರು. ಆಟಗಳಲ್ಲಿ ಪಾಲ್ಗೊಂಡರೆ ಯುವಕರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗ್ರಾಮದ ಯುವಕರನ್ನು ಆಕರ್ಷಿಸುವಂತಹ ಆಟದ ಮೈದಾನ, ಉದ್ಯಾನವನ ನಿರ್ಮಾಣ ಮಾಡಲು ಗ್ರಾಪಂ ಅಧಿಕಾರಿಗಳು ಸೇರಿದಂತೆ ಜನ್ರಪತಿನಿಧಿಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದರು.
ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿ, 12ರಿಂದ 18ವರ್ಷ ವಯಸ್ಸಿನ ಯುವ ಪೀಳಿಗೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಯುವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಕರು ತಮಗಿರುವ ಸಮಸ್ಯೆಗಳ ಕುರಿತು ಈ ಅವಧಿಯಲ್ಲಿ ಗ್ರಾಪಂಗೆ ಅರ್ಜಿ ಸಲ್ಲಿಸಬಹುದು. ಸಮಸ್ಯೆ ಪರಿಹಾರಕ್ಕಾಗಿ ಚರ್ಚಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹೂಲ್ಲೂರು, ಗ್ರಾಪಂ ಸದಸ್ಯರು, ಮುಖಂಡರು, ಸಿಬ್ಬಂದಿ ಇದ್ದರು.