ಕೆರೆ ತುಂಬಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಮನವಿ

100620 Hanumasagara Minister Ramesh Jarakiholi
Published on

ಹನುಮಸಾಗರ: ಏತ ನೀರಾವರಿ ಯೋಜನೆ ಅಡಿಯಲ್ಲಿ ಹನುಮಸಾಗರ ಹಾಗೂ ಸಮೀಪದ ಬೀಳಗಿ ಮತ್ತು ಕಬ್ಬರಗಿ ಗ್ರಾಮಗಳ ಕೆರೆ ತುಂಬಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಬೆಂಗಳೂರಿನ ಕಚೇರಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಚ್. ಪಾಟೀಲ್ ಮಾತನಾಡಿ, ಹನುಮಸಾಗರ ಹಾಗೂ ಸುತ್ತಲಿನ ಗ್ರಾಮಗಳು ಮಳೆಯಾಶ್ರಿತ ಕೃಷಿ ಪ್ರಧಾನ, ಹಿಂದುಳಿದ ಹಾಗೂ ಸತತ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಾಗಿವೆ. ಜಿಲ್ಲೆಯ ಏತ ನೀರಾವರಿ ಯೋಜನೆಯಲ್ಲಿ ಹನುಮಸಾಗರ, ಬೀಳಗಿ, ಕಬ್ಬರಗಿ ಗ್ರಾಮಗಳ ಕೆರೆಯನ್ನು ತುಂಬಿಸಿದರೆ ಸುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಯಬಹುದು ಮತ್ತು ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಏತ ನೀರಾವರಿ ಯೋಜನೆ ಅಡಿಯಲ್ಲಿ ಕುಷ್ಟಗಿ ತಾಲೂಕಿನ ಈ ಕೆರೆಗಳನ್ನು ತುಂಬಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net