

ಹನುಮಸಾಗರ: ಕರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಸ್ವಯಂ ಘೋಷಿತವಾಗಿ ಅರ್ಧದಿನ ಲಾಕ್ ಡೌನ್‌ಗೆ ಸ್ಥಳೀಯರು ನಿರ್ಧರಿಸಿದ್ದಾರೆ.
ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ನಡೆದ ಮುಖಂಡರು, ವರ್ತಕರು, ವ್ಯಾಪಾರಸ್ಥರು ಹಾಗೂ ಯುವಕರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಪಟ್ಟಣದ ಸುತ್ತಲಿನ ಗ್ರಾಮಗಳಾದ ಮಾಲಗಿತ್ತಿ, ಹನುಮನಾಳ, ಅಂಟರಠಾಣಾ, ಯರಿಗೋನಾಳ, ಚಳಗೇರಾ, ಹುಣಸಗೇರಿ ಗ್ರಾಮಗಳು ಸೇರಿ ವಿವಿಧೆಡೆ ಕರೊನಾ ಸೋಂಕು ಧೃಢ ಪಟ್ಟಿದ್ದು, ನಾವುಗಳು ಮುನ್ನೇಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ.
ಪಟ್ಟಣಕ್ಕೆ ಸುತ್ತಲಿನ 60 ಹಳ್ಳಿಗಳ ಜನರು ಮಾರುಕಟ್ಟೆಗೆ ಆಗಮಿಸುತ್ತಾರೆ. ಯಾವ ವ್ಯಕ್ತಿಗಳಿಗೆ ಸೋಂಕು ಇರುತ್ತದೆ ಎಂದು ತಿಳಿಯುವದಿಲ್ಲ. ಹೀಗಾಗಿ ಅದನ್ನು ನಿಯಂತ್ರಿಸಲು ಸ್ವಯಂ ಘೋಷಿಸಿತವಾಗಿ ಲಾಕ್‌ಡೌನ್ ಅನಿವಾರ್ಯವಾಗಿದೆ. ನಿತ್ಯ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆದು ಬಳಿಕ ಬಂದ್ ಮಾಡಬೇಕು ಎಂದು ಸಭೆಯಲ್ಲಿ ಸೇರಿದವರು ತೀರ್ಮಾನಿಸಿದರು. ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬಂದವರು ಕಡ್ಡಾಯವಾಗಿ ಆಸ್ಪತ್ರೆಗೆ ಭೇಟಿ ನೀಡಿ, ಸ್ವಯಂ ಕ್ವಾರಂಟೈನ್ ಮಾಡಿಕೊಳ್ಳಬೇಕು. ಈ ನಿಯಮ ಜು.31ರ ವರೆಗೆ ಅನ್ವಯಿಸಲಿದೆ ಎಂಬುದು ಮುಖಂಡರು ತಿಳಿಸಿದರು.
ಮುಖಂಡರಾದ ಮಹಾಂತಯ್ಯ ಕೋಮಾರಿ, ಮಹಾಂತೇಶ ಅಗಸಿಮುಂದಿನ, ಶ್ರೀ ಶೈಲ್ ಮೋಟಗಿ, ದುರಗಪ್ಪ ಮಡಿವಾಳರ, ಹನುಮಂತಪ್ಪ ರಾಠೋಡ, ಮಹಾಂತೇಶ ಕುಷ್ಟಗಿ, ಸೂಚಪ್ಪ ದೇವರಮನಿ, ಪ್ರಶಾಂತ ಗಡಾದ, ವೀರೇಶ ಈಳಗೇರ, ಸಿಕಂದರ ಹೊಸಮನಿ, ಶರಣಪ್ಪ ಬಾಚಲಾಪುರ, ಸಕ್ರಪ್ಪ ಬಿಂಗಿ, ವಿಶ್ವನಾಥ ಕನ್ನೂರ, ಭವಾನಿಸಾ ಪಾಟೀಲ್, ರಮೇಶ ಬಡಿಗೇರ, ಹನುಮಂತಪ್ಪ ಬಿಂಗಿ ಇತರರಿದ್ದರು.