

ಹನುಮಸಾಗರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪಾಲಕರು ಮತ್ತು ಶಿಕ್ಷಕರು ಮಾಡಬೇಕು ಎಂದು ಅಡವಿಭಾವಿ ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ ಹೇಳಿದರು.
ಸಮೀಪದ ಮಿಯ್ಯಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಡವಿಭಾವಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಎಲ್ಲ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು.
ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದ್ದು, ನಿರ್ಣಾಕರು ತಾರತಮ್ಯ ಮಾಡದೇ ಮಕ್ಕಳ ಕಲೆಯನ್ನು ಗುರುತಿಸಬೇಕು ಎಂದರು.
ಪಿಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಹಾಯಕ ನಿರ್ದೇಶಕ ಶರಣಪ್ಪ ಕೆ. ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಕಾರಂಜಿಯಂತೆ ಚಿಮ್ಮಿ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ ಕುಷ್ಟಗಿ ತಾಲೂಕಿನ ಕೀರ್ತಿ ಹೆಚ್ಚಳವಾಗಲಿ ಎಂದರು.
ಶಿಕ್ಷಣ ಸಂಯೋಜಕ ದಾವಲಸಾಬ್ ವಾಲೀಕಾರ, ಸಿಆರ್‌ಪಿ ಅಯ್ಯಪ್ಪ ಸುರುಳ, ಪಿಡಿಒ ಶಿವಪುತ್ರಪ್ಪ ಬರಿದೆಲಿ, ಮುಖ್ಯಶಿಕ್ಷಕ ಖಾಜಹುಸೇನ್ ಒಂಟೆಳಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು, ಗ್ರಾಪಂ ಉಪಾಧ್ಯಕ್ಷ ಶರಣಗೌಡ ಮ್ಯಾಗೇರಿ, ಸದಸ್ಯ ಗವಿಸಿದ್ದಪ್ಪ ಕುದುರ, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಇತರರಿದ್ದರು.