

ಹನುಮಸಾಗರ: ಸಮೀಪದ ಮದ್ಯ ಮುಕ್ತ ಗ್ರಾಮ ಎಂಬ ಹೆಸರು ಪಡೆದ ಯರಗೇರಾದ ಸರ್ಕಾರಿ ಹಿಪ್ರಾ ಶಾಲೆ ಆವರಣ ಕುಡುಕರು ಹಾಗೂ ಜೂಜುಕೋರರ ಅಡ್ಡೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸ್ವಚ್ಛಗೊಳಿಸುವುದು ನಿತ್ಯ ಕಾಯಕವಾಗಿದೆ.
ಶಾಲೆಯ ರಜಾ ದಿನ ಹಾಗೂ ಬಿಡುವಿನ ವೇಳೆಯಲ್ಲಿ ಪುಂಡ-ಪೋಕರಿಗಳು ಠಿಕಾಣಿ ಹೂಡಿ, ಕುಡಿದು ಇಸ್ಪೀಟ್ ಆಟವಾಡಿ, ಎಲ್ಲಿ ಬೇಕೆಂದರಲ್ಲಿ ಉಗುಳುವುದು, ಪ್ಲಾಸ್ಟಿಕ್, ಮದ್ಯದ ಬಾಟಲಿಗಳನ್ನು ಬಿಸಾಡುತ್ತಾರೆ. ನಿಯಂತ್ರಣಕ್ಕೆ ಶಾಲೆ ಗೇಟ್‌ಗೆ ಬೀಗ ಹಾಕಿದರೆ, ಅದನ್ನು ಮುರಿದು ಒಳ ಹೋಗುತ್ತಿದ್ದಾರೆ. ಗ್ರಾಮದ ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕಾದ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳೇ ಹೀಗೆ ಮಾಡುತ್ತಿದ್ದು, ತಲೆನೋವಾಗಿದೆ ಎಂದು ಹಿರಿಯ ಮುಖಂಡರು, ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.
ಮದ್ಯಮುಕ್ತ ಗ್ರಾಮ ಹೆಸರಿಗೆ ಸೀಮಿತ: ಮೂರು ವರ್ಷಗಳ ಹಿಂದೆ ಯರಗೇರಾ ಗ್ರಾಮವನ್ನು ಪೊಲೀಸರು ಮದ್ಯ ಮತ್ತು ಜೂಜಾಟ ಮುಕ್ತ ಗ್ರಾಮ ಎಂದು ಘೋಷಣೆ ಮಾಡಿದ್ದಾರೆ. ಆದರೆ, ಶಾಲಾ ಆವರಣದಲ್ಲಿ ನಿತ್ಯ ಬೀಳುತ್ತಿರುವ ಮದ್ಯದ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್, ಹಾಳಿ ಹಾಗೂ ಇಸ್ಟೀಟ್ ಎಲೆಗಳನ್ನು ನೋಡಿದರೆ ಮದ್ಯಮುಕ್ತ ಗ್ರಾಮ ಘೋಷಣೆ ಕೇವಲ ನಾಮಫಲಕಕ್ಕೆ ಸೀಮಿತವಾಗಿದೆ ಎಂಬುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಕೋಟ್
ಯರಗೇರಾದಲ್ಲಿ ಸರ್ಕಾರಿ ಶಾಲೆಯ ವಾತಾವರಣ ಹಾಳು ಮಾಡುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಲು ಎಸ್ಡಿಎಂಸಿ ಸಭೆ ಕರೆಯಲಾಗುವುದು. ಮದ್ಯ ಸೇವನೆ ಹಾಗೂ ಜೂಜಾಟದಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಸುರೇಂದ್ರ ಕಾಂಬಳೆ
ಬಿಇಒ, ಕುಷ್ಟಗಿ