

ಮುಂಜಾಗ್ರತಾ ಕ್ರಮಗಳು ಮರೀಚಿಕೆ
ಹನುಮಸಾಗರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ರೈತರು ಮಾರಾಟಕ್ಕೆ ತರಕಾರಿ ತಂದಿದ್ದರು. ಆದರೆ, ಕೊಂಡುಕೊಳ್ಳಲು ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರಿಗಳೇ ಇರಲಿಲ್ಲ.
ಸೋಮವಾರ ವಾರದ ಸಂತೆ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳಗ್ಗೆ 4.30ಕ್ಕೆ ಮಾರುಕಟ್ಟೆಗೆ ತರಕಾರಿ ತಂದಿದ್ದರು. ಬೆಳಗ್ಗೆ 6 ಗಂಟೆಗೆ ಬೆರಳೆಣಿಕೆಯ ವ್ಯಾಪಾರಿಗಳು ಮತ್ತು ಹರಜುದಾರರು ಬಂದಿದ್ದರು. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರು. ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 6ಕ್ಕೆ ತರಕಾರಿ ಮಾರಾಟ ಮಾಡಿ ಹಳ್ಳಿಗಳಿಗೆ ಹಿಂದಿರುಗುತ್ತಿದ್ದರು.
ಕರೊನಾ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ವಾರದ ಸಂತೆಯನ್ನು ನಿರ್ಬಂಧಿಸಿದೆ. ಆದರೆ, ಪಟ್ಟಣದಲ್ಲಿ ವಾರದ ಸಂತೆಗೆ ಯಾವುದೇ ನಿರ್ಬಂಧ ಇರಲಿಲ್ಲ. ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರಿಗಳು, ತರಕಾರಿ ಹರಾಜುದಾರರು ಹಾಗೂ ಗ್ರಾಹಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಿಲ್ಲ. ಬೆರಳೆಣಿಕೆಯ ಜನರು ಮಾಸ್ಕ್ ಹಾಕಿಕೊಂಡಿದ್ದರು. ಆದರೆ, ಪರಸ್ಪರ ಅಂತರ ಮರೀಚಿಕೆಯಾಗಿತ್ತು.