

ಹನುಮಸಾಗರ: ಕಳೆದ ಐದು ದಿನಗಳಿಂದ ನೀರು ಬರುತ್ತಿಲ್ಲ ಎಂದು ಆರೋಪಿಸಿ ಸಮೀಪದ ವೆಂಕಟಾಪುರ ಗ್ರಾಮಸ್ಥರು ತುಮರಿಕೊಪ್ಪ ಗ್ರಾಪಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಜೆಜೆಎಂ ಕುಡಿವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪೈಪ್‌ಲೈನ್ ಅಳವಡಿಸಿದ್ದು, ನಲ್ಲಿಗಳು ಕಿತ್ತು ಹೋಗಿವೆ. ನೀರು ಬರುತ್ತಿಲ್ಲವಲ್ಲ ಎಂದು ಜೆಜೆಎಂನವರಿಗೆ ಕೇಳಿದರೆ ನಮಗೆ ಪದೇಪದೆ ಯಾಕೆ ಫೋನ್ ಮಾಡುತ್ತೀರಿ ಎನ್ನುತ್ತಾರೆ. ಗ್ರಾಪಂ ಅಧಿಕಾರಿಗಳು, ಸದಸ್ಯರು, ನೀರುಘಂಟಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಐದು ದಿನಗಳಿಂದ ನೀರು ಬರದಿದ್ದರಿಂದ ಸಮಸ್ಯೆಯಾಗಿದೆ. ದೂರದಿಂದ ಮಹಿಳೆಯರು, ಮಕ್ಕಳು ನೀರು ತರಬೇಕಾಗಿದೆ. ಇದರಿಂದ ಗರ್ಭಿಣಿಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ರಸ್ತೆ ಬದಿಯಲ್ಲಿ ಕಸಸಂಗ್ರಹವಾಗಿದೆ. ಗ್ರಾಮಮನ್ನು ಬಹಿರ್ದೆಸೆಮುಕ್ತ ಗ್ರಾಮ ಎಂದು ಘೋಷಣೆ ಮಾಡಿದ್ದು, ನಾಮಫಲಕಕ್ಕೆ ಸೀಮಿತವಾಗಿದೆ. ಸಮಸ್ಯೆಗಳನ್ನು ತಿಳಿದುಕೊಳ್ಳಲು ಗ್ರಾಮದಲ್ಲಿ ಮೂರ್ನಾಲ್ಕು ವರ್ಷಗಳಿಂದ ವಾರ್ಡ್ ಹಾಗೂ ಗ್ರಾಮಸಭೆ ನಡೆಸಿಲ್ಲ ಎಂದು ಪ್ರತಿಭಟನಾನಿರತ ಗ್ರಾಮಸ್ಥರಾದ ಹೊಳಿಯಪ್ಪ ಹಟ್ಟಿ, ಮಂಜುನಾಥ ಹೊನ್ನೂರು, ಶಿವಕುಮಾರ ಸಾರಾಂಗಮಠ, ಮೌನೇಶ ಬಡಿಗೇರ, ನಾಗರಾಜ ಹೊಸೂರು, ಮಲ್ಲಪ್ಪ ಲಕ್ಕಲಕಟ್ಟಿ, ಶರಣಮ್ಮ ಲಕ್ಕಲಕಟ್ಟಿ, ಶಶಿಕಲಾ ಒಣಗೇರಿ, ಮಹಾಲಕ್ಷ್ಮೀ ಗೊಲ್ಲರ, ಹನುಮಂತ ಗೊಲ್ಲರ, ಗಿರಿಜಮ್ಮ ಸಾರಾಂಗಮಠ, ಮುತ್ತಣ್ಣ ಸಾರಾಂಗಮಠ, ಶಿವು ರಾಠೋಡ, ಸುರೇಶ ನಾಯ್ಕ ಇತರರು ಆರೋಪಿಸಿದರು.
ಜೆಜೆಎಂನವರು ಇನ್ನೂ ಗ್ರಾಪಂಗೆ ಹಸ್ತಾಂತರ ಮಾಡಿಲ್ಲ. ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಗ್ರಾಪಂಗೆ ಬಂದಿದ್ದರಿಂದ ಈಗ ಜೆಜೆಎಂ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿದ್ದು, ಮನೆಮನೆಗೆ ತೆರಳಿ ಪೈಪ್‌ಲೈನ್ ಕಾಮಗಾರಿ ಹಾಗೂ ನಲ್ಲಿ ಗಳನ್ನು ಪರಿಶೀಲಿಸುತ್ತಿದ್ದೇವೆ. | ಅಮೀನಸಾಬ ಅಲಂದರ್ ಪಿಡಿಒ ತುಮರಿಕೊಪ್ಪ ಗ್ರಾಪಂ