

ಹನುಮಸಾಗರ: ಪಟ್ಟಣದಲ್ಲಿ ಎರಡು ಕಡೆ ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದು ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು.
ನಿರ್ಮಾಣ ಹಂತದಲ್ಲಿರುವ ದ್ರವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಸ್ಮಶಾನದ ಹತ್ತಿರ ಇರುವ ಹಳ್ಳದಲ್ಲಿ ನಡೆಯುತ್ತಿರುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಹೊಸ ಬಸ್ ನಿಲ್ದಾಣ ಬಳಿ ಘಟಕ ನಿರ್ಮಾಣ ಪ್ರಗತಿಯಲ್ಲಿದೆ. ಪ್ರತಿ ಘಟಕಕ್ಕೆ 28 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ. ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮಾನವ ಬಳಸಿದ ನೀರನ್ನು ಸಂಸ್ಕರಣೆ ಮಾಡಲಾಗುವುದು. ಬಳಿಕ ಹೊಲ, ಗದ್ದೆಗಳಿಗೆ ಉಪಯೋಗಿಸಬಹುದು ಎಂದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಇಂಜಿನಿಯರ್ ಶಿವಪ್ರಕಾಶ, ಗ್ರಾಪಂ ಸದಸ್ಯರಾದ ಶ್ರೀಶೈಲ್ ಮೋಟಗಿ, ಮಹ್ಮದ ರಿಯಾಜ್ ಖಾಜಿ, ಮರೇಗೌಡ ಬೋದುರು, ಚಂದ್ರು ಬೆಳಗಲ್, ಮುಖಂಡ ಕಳಕಪ್ಪ ನಿರ್ವಾಣಿ ಇತರರಿದ್ದರು.