

ಹನುಮಸಾಗರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆರಂಭಿಸಲಾದ ತೊಗರಿ ಖರೀದಿ ಕೇಂದ್ರಲ್ಲಿ ಸರ್ವರ್ ಸಮಸ್ಯೆಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಬೆಂಬಲ ಬೆಲೆ ಯೋಜನೆಯಡಿ ತೊಗರಿ ಮಾರಾಟ ಮಾಡಲು ರೈತರು ನೋಂದಣಿಗೆ ಹೆಣಗಾಟ ನಡೆಸುವಂತಾಗಿದೆ.
ಸೋಮವಾರದಿಂದ ಕುಷ್ಟಗಿ ತಾಲೂಕಿನ ತೊಗರಿ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನೋಂದಣಿ ಆರಂಭವಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗಿಲ್ಲ. ಹೀಗಾಗಿ ರೈತರು ಸರದಿಯಲ್ಲಿ ನಿಂತು ಕಾಯುವಂತಹ ಪರಿಸ್ಥಿತಿ ಉಂಟಾಗಿದೆ. ಸರ್ವರ್ ಇದ್ದರೂ ಲಾಗಿನ್ ಸಮಸ್ಯೆ ಕಾಡುತ್ತಿರುವುದರಿಂದ ವಿವಿಧ ಗ್ರಾಮಗಳಿಂದ ರೈತರು ಬೆಳಗ್ಗಿನಿಂದ ಸಂಜೆವರೆಗೆ ಕಾಯುವಂತಾಗಿದೆ.
ಸಮಸ್ಯೆಗೆ ಕಾರಣ ಏನು?
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೋಂದಣಿ ಕೇಂದ್ರವನ್ನು ಆರಂಭಿಸಲಾಗಿದೆ. ಸರ್ವರ್ ಲಾಗಿನ್ ಸಮಸ್ಯೆಯಿಂದಾಗಿ ದಿನಕ್ಕೆ ಕೇವಲ ಬೆರಳಣಿಕೆಯಷ್ಟು ರೈತರ ಮಾತ್ರ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರೈತರು ಕೆಲಸಗಳನ್ನು ಬದಿಗೊತ್ತಿ ಸಂಜೆವರೆಗೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೋಂದಣಿಗೆ ಆಗಮಿಸುವ ರೈತರಿಗೆ, ವೃದ್ಧರಿಗೆ ಹಾಗೂ ರೈತ ಮಹಿಳೆಯರಿಗೆ ಕುಳಿತುಕೊಳ್ಳಲು ಆಸನ, ನೆರಳಿನ ವ್ಯವಸ್ಥೆ ನೋಂದಣಿ ಕೇಂದ್ರಗಳಲ್ಲಿ ಇಲ್ಲ. ಸದ್ಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ರೈತರು ಪರಿತಪಿಸುವಂತಾಗಿದೆ.
ಎಫ್‌ಐಡಿ ಇದ್ದರು ಕೆವೈಸಿ ಯಾಕೆ?
ಈಗಾಗಲೆ ರೈತರು ಎಫ್‌ಐಡಿಯನ್ನು ಮಾಡಿಸಿದ್ದಾರೆ. ಅದರಲ್ಲಿ ರೈತರ ಹೆಸರು, ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಪಹಣಿ ಸಂಖ್ಯೆ ಇರುತ್ತದೆ. ಆದರೆ, ಈ ಮೊದಲು ಎಫ್‌ಐಡಿ ಸಂಖ್ಯೆಯಿಂದ ರೈತರ ತೊಗರಿಯನ್ನು ಖರೀದಿಸಲಾಗುತ್ತಿತ್ತು. ಈ ಬಾರಿ ಹೊಸ ನಿಯಮಾವಳಿಂದಾಗಿ ಹಾಗೂ ಸಾಪ್ಟವೇರ್‌ನಿಂದಾಗಿ ಕೆವೈಸಿ ಅವಶ್ಯಕವಾಗಿದೆ. ಇದರಿಂದ ನೋಂದಣಿ ವೇಳೆಯಲ್ಲಿ ಕೆವೈಸಿಗಾಗಿ ಮತ್ತೊಮ್ಮೆ ರೈತರ ಎಲ್ಲ ಮಾಹಿತಿ ಸಾಪ್ಟವೇರ್‌ನಲ್ಲಿ ಅಪ್ಡೇಟ್ ಮಾಡಬೇಕಾಗಿರುವದರಿಂದ ತಡವಾಗುತ್ತಿದ್ದು, ನೋಂದಣಿ ಕಾರ್ಯ ನಿಧಾನವಾಗುತ್ತಿದೆ.