

ಹನುಮಸಾಗರ: ಶ್ರೀಶೈಲ ಮಲ್ಲಿಕಾರ್ಜುನ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮಲ್ಲಿಕಾರ್ಜುನ ಸೇವಾ ಸಮಿತಿಯ ಕಾರ್ಯದರ್ಶಿ ಮಹಾಂತಯ್ಯ ಕೋಮಾರಿ ಹೇಳಿದರು.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇಗುಲದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೇಗುಲದ ನವೀಕರಣ ಮತ್ತು ವಿನೂತನ ಮಹಾದ್ವಾರ ಲೋಕಾರ್ಪಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಮಲ್ಲಿಕಾರ್ಜುನ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಳೆಯ ದೇಗುಲವನ್ನು ಜಿರ್ಣೋದ್ಧಾರಗೊಳಿಸಲಾಗಿದೆ. ಇದರ ಜತೆಯಲ್ಲಿ ಮಹಾದ್ವಾರವನ್ನು ಅಳವಡಿಸಲಾಗಿದ್ದು, ಅದರ ಉದ್ಘಾಟನಾ ಸಮಾರಂಭ ಫೆ.5 ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ, ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನಬಸವಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ಬೆಳಗ್ಗೆ ದೇಗುಲದಲ್ಲಿ ಮಾಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಶ್ರೀಗಳ ಹಸ್ತದಿಂದ ಬೆಳಗ್ಗೆ 8ಕ್ಕೆ ಲೋಕಾರ್ಪಣೆಗೊಳ್ಳಲಿದೆ. ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಅನ್ನಸಂರ್ತಪಣೆ ಹಾಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಸಮಿತಿಯ ಅಧ್ಯಕ್ಷ ಪ್ರಶಾಂತ ಕುಷ್ಟಗಿ, ನಿರ್ದೇಶಕರಾದ ಶರಣಪ್ಪ ಹುಬ್ಬಳ್ಳಿ, ಕರಿಸಿದ್ಧಪ್ಪ ಚಿನಿವಾಲರ, ಶರಣಪ್ಪ ಕಂಪ್ಲಿ, ಸಂಗಪ್ಪ ಪಟ್ಟಣಶೆಟ್ಟಿ, ವೆಂಕಟೇಶ ಗುಡಿಕೋಟಿ, ಪ್ರಲ್ಹಾದ ಗುಡಿಕೋಟಿ, ರವಿ ಕಾಲಕಾಲೇಶ್ವರ, ಗ್ರಾಪಂ ಸದಸ್ಯರಾದ ಶ್ರೀಶೈಲಪ್ಪ ಮೋಟಗಿ, ಬಸವರಾಜ ದ್ಯಾವಣ್ಣನವರ ಇತರರಿದ್ದರು.