ಅಡ್ಡಪಲಕ್ಕಿ ಉತ್ಸವದೊಂದಿಗೆ ಕರಿಸಿದ್ದೇಶ್ವರ ಜಾತ್ರೆಗೆ ತೆರೆ

000
Published on

ಹನುಮಸಾಗರ: ಪಟ್ಟಣದ ಆರಾಧ್ಯ ದೈವ ಶ್ರೀ ಕರಿಸಿದ್ದೇಶ್ವರ ಜಾತ್ರೆ ನಿಮಿತ್ತ ಗುರುವಾರ ಅಡ್ಡಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.

ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಭಕ್ತರ ಜಯಘೋಷದೊಂದಿಗೆ ಶ್ರೀಸ್ವಾಮಿ ಮೂರ್ತಿ ಹಾಗೂ ಭಾವಚಿತ್ರವಿದ್ದ ಅಡ್ಡಪಲ್ಲಕ್ಕಿ ಉತ್ಸವ ಬೆಳಗ್ಗೆ ಶ್ರೀಮಠದಲ್ಲಿ ವಿಧ್ಯುಕ್ತವಾಗಿ ಆರಂಭವಾಯಿತು. ಬಳಿಕ ಅನ್ನದಾನೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿವರೆಗೂ ಪಲ್ಲಕ್ಕಿ ಸಂಚರಿಸಿತು. ತಮ್ಮ ಮನೆಗಳ ಮುಂದೆ ಮೆರವಣಿಗೆ ಆಗಮಿಸಿದ ಸಮಯದಲ್ಲಿ ಕುಟುಂಬ ಸಮೇತವಾಗಿ ಸಾರ್ವಜನಿಕರು ಹೂವು, ಕಾಯಿ, ಹಣ್ಣುಗಳೊಂದಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆ ಮುಂದೆ ಪುರುವಂತರ ಕುಣಿತ, ಸ್ಥಳೀಯ ಬಾಜಾ ಭಜಂತ್ರಿಯವರು, ವಿವಿಧ ಮಜಲುಗಳು ಹಾಗೂ ಸಕಲ ವಾದ್ಯವೈಭವಗಳು ಉತ್ಸವಕ್ಕೆ ಮೆರಗು ನೀಡಿದವು.

ಫೆ.21ರಂದು ಷಟಸ್ಥಲ ಧ್ವಜಾರೋಹಣದೊಂದಿಗೆ ತೆರೆದಾಳದ ಪ್ರವಚನಕಾರ ಶಿವಕುಮಾರ ಸ್ವಾಮೀಜಿ ಅವರಿಂದ ಮಹಾಂತೇಶ್ವರ ಲೀಲಾಮೃತ ಪುರಾಣ ಪ್ರವಚನದಿಂದ ಜಾತ್ರೆ ಪ್ರಾರಂಭವಾಗಿತ್ತು. ಅಂದಿನಿಂದ ಮಾ.24ರವರೆಗೆ ದೇವಸ್ಥಾನದಲ್ಲಿ ಪುರಾಣ, ಸಂಗೀತ ಕಾರ್ಯಕ್ರಮ ಇತರ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ಜರುಗಿದ್ದು, ಗುರುವಾರ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರೆ ತೆರೆಕಂಡಿತು.

ಪ್ರವಚನಕಾರ ತೇರದಾಳ ವಿರಕ್ತ ಮಠದ ಶಿವಕುಮಾರ ದೇವರು, ಜಿಪಂ ಮಾಜಿ ಸದಸ್ಯ ಭೀಮಣ್ಣ ಅಗಸಿಮುಂದಿನ, ಮುಖಂಡರಾದ ಕರಿಸಿದ್ಧಪ್ಪ ಕುಷ್ಟಗಿ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರು, ಅಂದಾನಯ್ಯ ಸೊಪ್ಪಿಮಠ, ರುದ್ರಗೌಡ ಗವಡಪ್ಪನವರ, ಪ್ರಶಾಂತ ಗಡಾದ, ಶ್ರೀಶೈಲ ಮೋಟಗಿ, ಮಹಾಂತಯ್ಯ ಕೋಮಾರಿ, ರಾಚಪ್ಪ ಚಿನಿವಾಲರ, ಬಸವರಾಜ ಚಿನಿವಾರ, ಮಲ್ಲಯ್ಯ ಕೋಮಾರಿ, ಶಿವಪ್ಪ ಕಂಪ್ಲಿ, ಬಸಪ್ಪ ದೋಟಿಹಾಳ, ಶರಣಪ್ಪ ಹುಬ್ಬಳ್ಳಿ, ರಮೇಶ ನಿಡಗುಂದಿ, ಈರಣ್ಣ ಹುನಗುಂಡಿ, ಗಂಗಯ್ಯ, ವಿಜಯ ಕುಷ್ಟಗಿ, ಗ್ರಾಪಂ ಸದಸ್ಯರು, ಯುವಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net