

ಹನುಮಸಾಗರ: ಶರಣರ ವಚನಗಳು ಬದುಕಿಗೆ ದಾರಿ ದೀಪವಾಗುತ್ತವೆ. ಅವುಗಳನ್ನು ಓದಿ ಅರ್ಥ ಮಾಡಿಕೊಂಡು ಜೀವನದಲ್ಲಿ ಪಾಲಿಸಬೇಕು ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಸದಾನಂದಯ್ಯ ಶಾಸ್ತ್ರಿ ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದ ಜಾತ್ರೆ ನಿಮಿತ್ತ ಶುಕ್ರವಾರ ಸಂಜೆ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯಬೇಕು. ಪ್ರವಚನಗಳನ್ನು ಕೇಳಿ ಮನದಲ್ಲಿಟ್ಟುಕೊಂಡು ನಿಮ್ಮಲ್ಲಿರುವ ದುಶ್ಚಟಗಳನ್ನು ಬಿಟ್ಟು ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ. ಎಷ್ಟು ವರ್ಷಗಳ ಬಾಳುತ್ತೇವೆ ಎನ್ನುವುದು ಮುಖ್ಯವಲ್ಲ. ನಾವು ಇರುವಷ್ಟು ದಿವಸ ಸುಖವಾಗಿ ಬಾಳುವುದು ಮುಖ್ಯ. ಪ್ರತಿಯೊಬ್ಬರಿಗೂ ಸಂಸ್ಕಾರ ಅಗತ್ಯ. ಮಕ್ಕಳಿಗೆ ಓದಿನ ಜತೆಗೆ ಸಂಸ್ಕಾರ ನೀಡಬೇಕೆಂದು ಹೇಳಿದರು.
ಮುಖಂಡ ಕರಿಸಿದ್ದಪ್ಪ ಕುಷ್ಟಗಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ, ಮುಖಂಡರಾದ ರಾಚಪ್ಪ ಚಿನಿವಾಲರ, ಮಲ್ಲಯ್ಯ ಕೋಮಾರಿ, ನಿಂಗಪ್ಪ ಮೋಟಗಿ, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ಶಿವಪ್ಪ ಕಂಪ್ಲಿ, ಸಿದ್ದರಾಮಯ್ಯ ಕರಕಂಡಿಮಠ, ಈರಣ್ಣ ಹುನಗುಂಡಿ, ಮಹಾಂತಯ್ಯ ಕೋಮಾರಿ, ಬಸವರಾಜ ಚಿನಿವಾಲರ, ಶರಣಪ್ಪ ಹುಬ್ಬಳ್ಳಿ, ವೆಂಕಟೇಶ ಗುಡಿಕೋಟಿ, ರಮೇಶ ನಿಡಗುಂದಿ, ಲಕ್ಷ್ಮಣ ಇತರರಿದ್ದರು.