

ಹನುಮಸಾಗರ: ಸಮೀಪದ ಗುಡದೂರಕಲ್ಲ ಗ್ರಾಮದ ನಿವಾಸಿಗಳು ವಾರ್ಡ್‌ನ ಚರಂಡಿಯನ್ನು ಶನಿವಾರ ಸ್ವಚ್ಛತೆ ಕೈಗೊಂಡರು.
ಯರಗೇರಾ ಗ್ರಾಪಂ ವ್ಯಾಪ್ತಿಯ ಗುಡದೂರಕಲ್ಲ ಗ್ರಾಮದ ಎಸಿ ಕಾಲನಿ ಚರಂಡಿ ತುಂಬಿ, ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿತ್ತು. ಅಲ್ಲದೆ ತ್ಯಾಜ್ಯ ಸಂಗ್ರಹವಾಗಿ ಸಿಸಿ ರಸ್ತೆಯಲ್ಲಿ ಓಡಾಡಲು ತೊಂದರೆ ಅನುಭವಿಸುವಂತಾಗಿತ್ತು. ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಗ್ರಾಪಂ ಸದಸ್ಯರು ಹಾಗೂ ಪಿಡಿಒ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ಗಬ್ಬು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಅದಕ್ಕಾಗಿ ನಿವಾಸಿಗಳು ರಸ್ತೆ ಸ್ವಚ್ಛತೆಗೆ ಮುಂದಾಗಿದ್ದಾರೆ.
ಕೇಂದ್ರ-ರಾಜ್ಯ ಸರ್ಕಾರಗಳು ಸ್ವಚ್ಛತೆ ಮೊದಲ ಆದ್ಯತೆ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ, ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಮಲೀನತೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ನಾವೇ ಗ್ರಾಪಂ ಆಡಳಿತ ವರ್ಗಕ್ಕೆ ನಾಚಿಕೆ ಬರಲಿ ಎಂದು ಚರಂಡಿ ಸ್ವಚ್ಛತೆಗೆ ಮುಂದಾಗಿದ್ದೇವೆ ಎಂದು ಗ್ರಾಮಸ್ಥರಾದ ನಾಗಪ್ಪ ಹೊಸಮನಿ, ಶಿವಪ್ಪ ಮಾದರ, ರೇವಪ್ಪ ಮಾದರ, ಯಮನೂರಪ್ಪ, ಕಾಳಪ್ಪ, ಶರಣಪ್ಪ, ಮಾರುತಿ, ಯಮನೂರು, ದುರಗೇಶ ಎಂದು ತಿಳಿಸಿದ್ದಾರೆ.