

ಹನುಮಸಾಗರ: ಸೇವಾಲಾಲ್ ಮಹಾರಾಜರು ಸಾಮಾಜಿಕ ಕಾರ್ಯಗಳಿಂದ ಹೆಚ್ಚು ಜನಪ್ರಿಯರಾಗಿದ್ದರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ ಹೇಳಿದರು.
ಸಮೀಪದ ಬಾದಿಮನಾಳ ಗ್ರಾಮದಿಂದ ವೆಂಕಟಾಪುರ ತಾಂಡಾದವರಗೆ ಬಂಜಾರ ಸಮುದಾಯದಿಂದ ಹಮ್ಮಿಕೊಂಡ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಮೂರ್ತಿ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯ ಮಾತ್ರವಲ್ಲದೇ ಎಲ್ಲ ಜನಾಂಗದವರಿಗೂ ಸನ್ಮಾರ್ಗದ ಬೋಧನೆ ಮಾಡಿದ್ದಾರೆ. ಅವರ ತತ್ವಾದರ್ಶಗಳನ್ನು ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ತಪ್ಪು ಮಾಡಿದರೆ ಶಿಕ್ಷಿಸಿ ತಿಳಿ ಹೇಳಿ. ಒಳ್ಳೆಯ ಕಾರ್ಯ ಮಾಡಿದಾಗ ಮೆಚ್ಚುಗೆ ವ್ಯಕ್ತಪಡಿಸಬೇಕು. ಅಂದಾಗ ಮಾತ್ರ ನಿಮ್ಮ ಮಗು ಒಳ್ಳೆಯ ಸಂಸ್ಕಾರವಂತನಾಗಿ ಬೆಳೆಯಲು ಸಾಧ್ಯ. ಒಂದು ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆಯಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಎಂದರು.
ಕನಕ ಗುರು ಪೀಠದಿಂದ ಸಸಿ, ಕುಂಭ, ಕಳಸ, ಭಜನೆ ಸೇರಿ ಸಕಲ ವಾದ್ಯ ವೈಭವಗಳೊಂದಿಗೆ ಗೊರೆಬಿಹಾಳ ಕ್ರಾಸ್ ಮಾರ್ಗವಾಗಿ ವೆಂಕಟಾಪುರದ ಪ್ರಮುಖ ಬೀದಿಗಳಲ್ಲಿ ನೂತನ ಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ತಾಪಂ ಮಾಜಿ ಸದಸ್ಯ ಗಣೇಶ ಪೂಜಾರ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ ಠಾಕೂರ ನಾಯಕ್, ಗ್ರಾಪಂ ಸದಸ್ಯ ತುಕಾರಾಮ ಕಮತರ, ಪ್ರಮುಖರಾದ ಆನಂದ ನಾಯ್ಕ, ದಂಜಪ್ಪ ಪೂಜಾರ, ದೇವಪ್ಪ ನಾಯ್ಕ, ಪೀರಪ್ಪ ಕಮ್ಮಾರ, ಹನುಮಪ್ಪ ಜಾದವ, ಬದ್ದಪ್ಪ ಕಾರಬಾರಿ, ರಮೇಶ ಪಮ್ಮಾರ, ಕೃಷ್ಣಪ್ಪ ಕಮತರ, ಯಮನೂರಪ್ಪ ಜಾಧವ, ಮೌನೇಶ ರಾಠೋಡ, ಬಸವರಾಜ ರಾಠೋಡ, ಶಿವುರಾಠೋಡ ಇತರರಿದ್ದರು.