ಕಪ್ಪು ಪಟ್ಟಿ ಧರಿಸಿ ಅತಿಥಿ ಶಿಕ್ಷಕರ ಪ್ರತಿಭಟನೆ

0000
Published on

ಹನುಮಸಾಗರ: ಸೇವಾ ಭದ್ರತೆ ಮತ್ತು ಶಿಕ್ಷಕರ ನೇರ ನೇಮಕಾತಿಯಲ್ಲಿ ಪ್ರತಿ ವರ್ಷ ಕೃಪಾಂಕ ನೀಡುವಂತೆ ಒತ್ತಾಯಿಸಿ ಹೋಬಳಿಯ ಅತಿಥಿ ಶಿಕ್ಷಕರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಭಾರ ಮುಖ್ಯಶಿಕ್ಷಕಿ ರೋಹಿಣಿ ಜ್ಯೋತಿ ಮನವಿ ಸಲ್ಲಿಸಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರವಿಟ್ಟು ಕಪ್ಪು ಪಟ್ಟಿ ಧರಿಸುವ ಮೂಲಕ ಕೆಲಸಕ್ಕೆ ಹಾಜರಾದರು. ಅತಿಥಿ ಶಿಕ್ಷಕ ಬಾಳಪ್ಪ ಗುಡಗದ್ದಿ ಮಾತನಾಡಿ, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಜನರು ಪೂರ್ವಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗಳನ್ನು ಸರಿಪಡಿಸುತ್ತಿಲ್ಲ. ಸೇವಾಭದ್ರತೆ ನೀಡುತ್ತಿಲ್ಲ. ಅತಿಥಿ ಶಿಕ್ಷಕರಿಗೆ ಪ್ರತಿವರ್ಷ ಶೇ.5ರಂತೆ ಕೃಪಾಂಕ ನೀಡಿ ಕಾಯಂ ಶಿಕ್ಷಕರನ್ನಾಗಿ ನೇಮಕ ಮಾಡಬೇಕು. ಬಿಸಿಯೂಟ ಅಡುಗೆದಾರರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಂತೆ ನಮಗೂ ಸೇವಾ ಭದ್ರತೆ ನೀಡಬೇಕು. ಯಾವ ಶಾಲೆಯಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತೇವೋ ಅದೇ ಶಾಲೆಯಲ್ಲಿ ನಮ್ಮನ್ನು ಪ್ರತಿವರ್ಷ ಅತಿಥಿ ಶಿಕ್ಷಕರಾಗಿ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಅತಿಥಿ ಶಿಕ್ಷಕರಾದ ರವಿಚಂದ್ರ ಪಾವಿ, ಶಶಿಧರ ಹಕ್ಕಿ, ಬಸವರಾಜ ಹನುಮಸಾಗರ, ಅಬ್ದುಲ್ ವಾಲಿಕಾರ, ರೇಖಾ ಹೊಳಿ, ಶೀಲಾ ಚವ್ಹಾಣ, ತಾರಾ ವನಕಿ, ಪಾರ್ವತಿ ಬಂಡಿವಡ್ಡರ, ಗೀತಾ ಯಡಹಳ್ಳಿ, ದುರಗೇಶ ಮಡಿವಾಳರ, ವೆಂಕಟೇಶ ಕರೆಕಲ್ಲ, ಮಲ್ಲನಗವಡ ಪೊಲೀಸ್‌ಪಾಟೀಲ್, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net