ನಮ್ಮ ಹೊಲ-ನಮ್ಮ ರಸ್ತೆ ಕಳಪೆ

Hanumasagara road repair
ಹನುಮಸಾಗರದ ಶಾದಿಮಹಲ್ನ ಹಿಂಬದಿ ಗ್ರಾಪಂನಿಂದ ನಿರ್ಮಿಸಿರುವ ನಮ್ಮ ಹೊಲ-ನಮ್ಮ ರಸ್ತೆ ಯೋಜನೆಯ ರಸ್ತೆಯಲ್ಲಿ ಗ್ರಾನೈಟ್ ಕಲ್ಲುಗಳು ಮೇಲೆದ್ದಿರುವುದು.
Published on

ಹನುಮಸಾಗರ: ಗ್ರಾಮದಲ್ಲಿ ವಿವಿಧೆಡೆ ನಮ್ಮ ಹೊಲ-ನಮ್ಮ ರಸ್ತೆ ಯೋಜನೆಯಡಿ ನಿರ್ಮಿಸಿದ ರಸ್ತೆ ಕಳಪೆ ಮಟ್ಟದಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಗ್ರಾಮದ ಕುಷ್ಟಗಿ ಮುಖ್ಯ ರಸ್ತೆಯಿಂದ ಸ.ನಂ. 35/1/2 ರ ಶಿವಕುಮಾರ ಚಿನಿವಾಲರ ಹೊಲದವರೆಗೆ, ಕಳಕಪ್ಪ ಮೋಟಗಿ ಹೊಲದಿಂದ ಮಲ್ಲಪ್ಪ ಬದಾಮಿ ಹೊಲದವರೆಗೆ ಹಾಗೂ ಲಕ್ಷ್ಮಣಸಾ ದಲಬಂಜನ್ ಹೊಲ ದಿಂದ ನಜೀರಸಾಬ ಮೆಣೆದಾಳ ಹೊಲದವರೆಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ದಾರಿ ನಿರ್ಮಿಸಲಾಗಿದೆ. ಪ್ರತಿ ಕಾಮಗಾರಿಗೆ 5 ಲಕ್ಷ ರೂ. ನಂತೆ ಮೂರು ಕಾಮಗಾರಿ ಕೈಗೊಂಡಿದ್ದು, ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂನಿಂದ ಮಾಡಲಾಗಿದ್ದು, ಕಳಪೆ ಮಟ್ಟದ್ದಾಗಿವೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.

ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಗೆ 500 ಮೀ. ಉದ್ದ. 3.5 ಮೀ. ಅಗಲ, 0.45 ಟ್ರಂಚ್ ನಿರ್ಮಾಣ ಮಾಡಬೇಕು. ಜತೆಗೆ ರಸ್ತೆಯನ್ನು ಹದಗೊಳಿಸಿ ಸಮನಾಂತರ ಮಾಡಿಕೊಂಡು 40 ಎಂ.ಎಂ ಕಡಿಗಳನ್ನು ಬಳಸಬೇಕು ಎಂಬ ನಿಯಮ ಕ್ರಿಯಾಯೋಜನೆಯಲ್ಲಿದೆ. ಆದರೆ, ಕಾಮಗಾರಿ ಕೈಗೊಂಡವರು ಕಡಿಯೊಂದಿಗೆ ಗ್ರಾನೈಟ್ ತುಂಡುಗಳನ್ನು ಹಾಕಿ, ಅದರ ಮೇಲೆ ಮರಮ್‌ಬಳಸಿದ್ದರಿಂದ ಗ್ರಾನೈಟ್ ತುಂಡು ಮೇಲೆದ್ದಿವೆ. 1500 ಮೀ. ರಸ್ತೆ ಸಮನಾಂತರವಾಗಿಲ್ಲ. ಇದರಿಂದ ದ್ವಿಚಕ್ರ ವಾಹನ ಸವಾರರು ಬೀಳುವ ಸಾಧ್ಯತೆಯಿದೆ. ಅಲ್ಲದೇ, ರಸ್ತೆ ಪಕ್ಕದಲ್ಲಿ ಮಳೆಯ ನೀರು ಹರಿದು ಹೋಗುವಂತೆ ಮಾಡಬೇಕಾಗಿತ್ತು. ಮಳೆ ನಿರು ರಸ್ತೆಯಲ್ಲೇ ನಿಲ್ಲುತ್ತಿದೆ ಎಂದು ರೈತರಾದ ಯಮನೂರ, ಚಂದ್ರಶೇಖರ, ಮಲ್ಲಪ್ಪ, ಅಡಿವೆಪ್ಪ, ಚಂದ್ರು, ಅರ್ಜುನಪ್ಪ, ಬಾಬುಮೀಯಾ, ಶಿವಕುಮಾರ, ಕಳಕಪ್ಪ, ಯಲ್ಲಪ್ಪ, ಮಹಾಂತಪ್ಪ ದೂರಿದ್ದಾರೆ.

ಗ್ರಾಮದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಸಂಪೂರ್ಣ ಆದ ನಂತರ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು.

| ನಿಂಗಪ್ಪ ಮೂಲಿಮನಿ ಪಿಡಿಒ ಹನುಮಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net