ವೇತನ ತಾರತಮ್ಯ ನೀತಿ ಸರಿಪಡಿಸಿ

Hanumasagar workers protest
ಹನುಮಸಾಗರದ ಬಹುಗ್ರಾಮ ಕುಡಿಯುವ ನೀರಿನ ಘಟಕದ ಮುಂಭಾಗ ಧರಣಿ ನಿರತ ಕಾರ್ಮಿಕರೊಂದಿಗೆ ಗುರುವಾರ ತಹಸೀಲ್ದಾರರಾದ ಅಶೋಕ ಶಿಗ್ಗಾವಿ, ಬಸವರಾಜ ಚನ್ನಹಳ್ಳಿ ಮಾತುಕತೆ ನಡೆಸಿದರು. ಎಇಇ ಸುರೇಶ ಇತರರಿದ್ದರು.
Published on

ಹನುಮಸಾಗರ: ಸಮೀಪದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಘಟಕದ ಮುಂಭಾಗ ಐದು ದಿನದಿಂದ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಅಶೋಕ ಶಿಗ್ಗಾವಿ ಭೇಟಿ ನೀಡಿ, ಬೇಡಿಕೆ ಈಡೇರಿಸುವುದಾಗಿ ಗುರುವಾರ ಭರವಸೆ ನೀಡಿದರು.

ಕಾರ್ಮಿಕರು ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ನೀಡಲಿ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗುತ್ತಿಗೆ ಪಡೆದ ಕಂಪನಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕರು ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಅಶೋಕ ಶಿಗ್ಗಾವಿ ಭರವಸೆ ನೀಡಿದರು.

ಕಳೆದ ಎರಡ್ಮೂರು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಆದರೆ, ಕಂಪನಿಯರು ಇನ್ನೂವರೆಗೆ ಸೇರ್ಪಡೆ ಪತ್ರ ನೀಡಿಲ್ಲ. ವೇತನ ನೀಡುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಎರಡು ವರ್ಷಗಳಿಂದ ಬೋನಸ್ ನೀಡಿಲ್ಲ. ಕಂಪನಿಯಲ್ಲಿ ಒಟ್ಟು 250ಕ್ಕೂ ಅಧಿಕ ಕಾರ್ಮಿಕರ ಅವಶ್ಯಕತೆಯಿದೆ. ಆದರೆ, ಕೇವಲ 80 ಕಾರ್ಮಿಕರಿಂದ ಎಲ್ಲ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ ಭದ್ರತೆ ಎನ್ನುವುದೇ ಇಲ್ಲ. ಕಂಪನಿಯಿಂದ ಸುರಕ್ಷತೆಯ ಕಿಟ್‌ಗಳನ್ನು ವಿತರಿಸಿಲ್ಲ. ಹೆಚ್ಚಿನ ಕೂಲಿ ನೀಡದೇ ನಿರಂತರ 12 ಗಂಟೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿ ಭರವಸೆ ನೀಡಿದರೂ ಕಾರ್ಮಿಕರು ಪ್ರತಿಭಟನೆಯನ್ನು ಮುಂದುವರಿಸಿದರು.ಯಲಬುರ್ಗಾ ತಹಸೀಲ್ದಾರ್ ಬಸವರಾಜ ಚನ್ನೆಹಳ್ಳಿ, ಎಇಇ ಸುರೇಶ, ಬಿಜೆಪಿ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರ, ಯಮನೂರ ಮನ್ನೇರಾಳ, ಕಾರ್ಮಿಕರಾದ ರಾಹುಲ್ ಆಡೀನ್, ಮಹೇಶಗೌಡ ಪಾಟೀಲ್, ಸಂಗಯ್ಯ ಹಿರೇಮಠ, ಶರಣಪ್ಪ ಕೆಲ್ಲೂರ, ರವಿ ಜಾಲಿಹಾಳ, ಶೇಖರಪ್ಪ ಗೂಳಿ, ಪ್ರಶಾಂತ ಹಿರೇಮಠ, ಮಾರುತಿ ದೊಡ್ಡಮನಿ, ಶರಣಗೌಡ ಗೌಡರ, ಶಂಕರಪ್ಪ, ಬಸವರಾಜ ಮೂಕಾಸಿ, ಮಂಜುನಾಥ ಕಂದಗಲ್, ಶರಣಪ್ಪ ಗೌಡ್ರ, ಬಸವರಾಜ ಹೊರಪ್ಯಾಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net