15 ಬೇಡಿಕೆ ಈಡೇರಿಕೆಗೆ ಕಂಪನಿ ಒಪ್ಪಿಗೆ

Hanumasagar worker portest MLA Patil Visit
ಹನುಮಸಾಗರ ಸಮೀಪದ ಮನ್ನೇರಾಳದಲ್ಲಿ ಪ್ರತಿಭಟನಾ ನಿರತ ಕಾರ್ಮಿಕರೊಂದಿಗೆ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಚರ್ಚೆ ನಡೆಸಿದರು. ತಹಸೀಲ್ದಾರ್ ಅಶೋಕ ಶಿಗ್ಗಾವಿ, ಯಲಬುರ್ಗಾ ಎಇಇ ರಿಜ್ವಾನ್, ಕುಷ್ಟಗಿ ಎಇಇ ಸುರೇಶ, ಪ್ರಮುಖರಾದ ಬಸವರಾಜ ಹಳ್ಳೂರ, ಬಸವರಾಜ ದ್ಯಾವಣ್ಣನವರ, ರಮೇಶ ಬಡಿಗೇರ ಇತರರಿದ್ದರು.
Published on

ಹನುಮಸಾಗರ: ವೇತನ ತಾರತಮ್ಯ ನಿವಾರಣೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಸಮೀಪದ ಮನ್ನೇರಾಳದ ಬಹುಗ್ರಾಮ ಕುಡಿವ ನೀರು ಯೋಜನೆ ಘಟಕದ ಮುಂದೆ ಏಳು ದಿನದಿಂದ ಪ್ರತಿಭಟನೆ ನಡೆಸುತ್ತಿರುವ ಎಲ್ ಆ್ಯಂಡ್ ಟಿ ಕಂಪನಿ ಕಾರ್ಮಿಕರು, ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಭರವಸೆ ಮೇರೆಗೆ ಶನಿವಾರ ಹೋರಾಟ ಹಿಂಪಡೆದರು.

ಹೋರಾಟ ಸ್ಥಳಕ್ಕೆ ತೆರಳಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು, 27ಬೇಡಿಕೆಗಳ ಬಗ್ಗೆ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅದರಲ್ಲಿ 15ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದಾರೆ. ಕಾರ್ಮಿಕರಿಗೆ ಅನ್ಯಾಯ ಆಗಲು ಬಿಡಲ್ಲ. ಮತ್ತೊಮ್ಮೆ ಅನ್ಯಾಯ ಆದರೆ ನಿಮ್ಮೊಂದಿಗೆ ನಾನೂ ಹೋರಾಟ ಮಾಡುತ್ತೇನೆ. ಸದನದಲ್ಲಿ ಇದ್ದಾಗ ಪ್ರತಿಭಟನೆ ಬಗ್ಗೆ ತಿಳಿಯಿತು. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲು ಒತ್ತಡ ಇದೇ ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಮಿಕರ ಮೇಲೆ ಕೇಸ್ ಯಾಕೆ?. ಅವರು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದು ಹೇಗೆ ಕೇಸು ದಾಖಲಿಸುತ್ತಿರೊ ನಾನು ನೋಡುತ್ತೇನೆ ಎಂದು ಹೇಳಿದ್ದೇನೆ. ಇಂದು ಪ್ರತಿಭಟನೆ ಕೈಬಿಡಿ. ಏನೇನು ಆಗಬೇಕು ಎಂದು ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಎಇಇಗಳು, ನೀವು ಹಾಗೂ ಕಂಪನಿ ಅಧಿಕಾರಿಗಳು ಸೋಮವಾರ ಚರ್ಚೆ ಮಾಡಿ. ತಾಲೂಕಿನಲ್ಲೇ ಹೆಚ್ಚಿನ ಉದ್ಯೋಗಿಗಳಿದ್ದು, ಅವರಿಗೆ ಕೆಲಸ ನೀಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾವಿ, ಯಲಬುರ್ಗಾ ಎಇಇ ರಿಜ್ವಾನ್, ಕುಷ್ಟಗಿ ಎಇಇ ಸುರೇಶ, ಪ್ರಮುಖರಾದ ಬಸವರಾಜ ಹಳ್ಳೂರ, ಬಸವರಾಜ ದ್ಯಾವಣ್ಣನವರ, ರಮೇಶ ಬಡಿಗೇರ, ಕಂಪನಿಯ ವಸಂತ, ಸುಬ್ರಮಣ್ಯ, ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net