

ಹನುಮಸಾಗರ: ಸಮೀಪದ ಮಾವಿನಇಟಗಿ ಗ್ರಾಮಸ್ಥರು ತಮ್ಮೂರಿನ ಕೆರೆ ದಡದ ರಸ್ತೆಯನ್ನು ತಾವೇ ಅಭಿವೃದ್ಧಿಪಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಕೆರೆ ದಡದ ರಸ್ತೆ ಅಭಿವೃದ್ಧಿಗೊಳಿಸುವಂತೆ ಯರಗೇರಾ ಗ್ರಾಪಂಗೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಹದಗೆಟ್ಟ ರಸ್ತೆ ಜಮೀನುಗಳಿಗೆ ಸಂಪರ್ಕ ಕಲ್ಪಿಸುವುದರಿಂದ ನೂರಾರು ರೈತರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು.
ಹೊಲದಿಂದ ಮಾರುಕಟ್ಟೆ, ಮನೆಗೆ ಫಸಲು ಸಾಗಿಸಲು ಹರಸಾಹಸಪಡಬೇಕಿತ್ತು. ಮಳೆಗಾದಲ್ಲಿ ಜಾನುವಾರುಗಳೊಂದಿಗೆ ಜಮೀನಿಗೆ ತೆರಳುವುದು ಸವಾಲಾಗಿತ್ತು. ಈ ಎಲ್ಲ ತೊಂದರೆಗಳಿಗೆ ಅಧಿಕಾರಿಗಳು ಪರಿಹಾರ ಕಲ್ಪಿಸುವಲ್ಲಿ ವಿಫಲರಾದ್ದರಿಂದ ಗ್ರಾಮಸ್ಥರೆಲ್ಲ ದೇಣಿಗೆ ಸಂಗ್ರಹಿಸಿ ಜೆಸಿಬಿ ಮೂಲಕ ಕೆರೆ ದಡದ ರಸ್ತೆ ಅಭಿವೃದ್ಧಿಗೊಳಿಸಿದ್ದು, ಇದರಿಂದ ಎಲ್ಲರಿಗೂ ಅನುಕೂಲವಾಗಿದೆ.