

ಮುತ್ತು ಗ್ವಾತಗಿಹನುಮಸಾಗರ: ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರೂ ಒಟ್ಟಾಗಿ ಜನಾಂದೋಲನ ನಿರ್ಮಾಣ ಮಾಡಿದರೆ ಮಾತ್ರ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಸಾಧ್ಯ ಎಂದು ಪ್ರಾಚಾರ್ಯ ಡಾ.ಎಸ್.ವಿ. ಡಾಣಿ ಹೇಳಿದರು.
ಹೂಲಗೇರಾದ ಎಂ.ಆರ್. ಪಾಟೀಲ್ ಮೈದಾನದಲ್ಲಿ ನಿರ್ಮಿಸಿದ ದಿ. ವಾಸಪ್ಪ ಮಾಸ್ತರ ಮಹಾವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸಂಕೀರ್ಣ ಗೋಷ್ಠಿಯಲ್ಲಿ ಮಾತನಾಡಿದರು. 371ಜೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು. ಸಾಹಿತಿಗಳು ಜನರ ಸಮಸ್ಯೆಗಳಿಗೆ ಧ್ವನಿಯಾಗುವಂತ ಸಾಹಿತ್ಯ ರಚಿಸಬೇಕು ಎಂದರು.
ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ಬಿನ್ನಾಳ ಮಾತನಾಡಿ, ಸಾಹಿತ್ಯ ಮನುಷ್ಯ ಜೀವನದ ಪ್ರತಿಬಿಂಬ. ಕಲ್ಲು ಬರಹಗಳು ಈ ನಾಡಿನ ಮೊದಲ ಸಾಹಿತ್ಯ. ಹುಚನೂರು, ಬೀಳಗಿ ಸೇರಿ ಕುಷ್ಟಗಿ ತಾಲೂಕಿನ ವಿವಿಧೆಡೆ 30ಕ್ಕೂ ಹೆಚ್ಚು ಶಾಸನಗಳು ಸಿಕ್ಕಿವೆ. ಕುಷ್ಟಗಿ ತಾಲೂಕಿನಲ್ಲಿ ಅನೇಕರು ವಿವಿಧ ಸಾಹಿತ್ಯ ರಚಿಸಿದ್ದಾರೆ ಎಂದರು.
ಪ್ರಗತಿಪರ ಚಿಂತಕ ಗಂಗಾಧರ ಕುಷ್ಟಗಿ ಮಾತನಾಡಿ, ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಕೊಪ್ಪಳ ಜಿಲ್ಲೆಯಲ್ಲಿ ಒಣಬೇಸಾಯ ಇರುವುದಿಲ್ಲ ಎಂದರು.
ಸಂಪನ್ಮೂಲ ಶಿಕ್ಷಕ ಶರಣಪ್ಪ ತೆಮ್ಮಿನಾಳ ಮಾತನಾಡಿ, ಮಕ್ಕಳನ್ನು ಅಂಕ ಗಳಿಕೆಗೆ ಮಾತ್ರ ಸೀಮಿತ ಮಾಡದೇ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಮನೆಯಿಂದಲೇ ಬೆಳೆಸಬೇಕು ಎಂದರು.
ಹಿರಿಯ ಸಾಹಿತಿ ಸಾವಿತ್ರಿ ಮುಜುಮದಾರ ಮಾತನಾಡಿ, ಸಮಾಜದಲ್ಲಿ ಅನೇಕ ಮಹಿಳೆಯರು ಕೂಲಿ ಮಾಡಿ ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿದ್ದಾರೆ. ಈ ಕುರಿತ ಬರವಣಿಗೆ ಹೆಚ್ಚಬೇಕಿದೆ. ಕುಟುಂಬದ ಆಗುಹೋಗುಗಳನ್ನು ಎದುರಿಸುತ್ತಿರುವ ಮಹಿಳೆಯರ ಬಗ್ಗೆ ಬರೆಯಬೇಕಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ಮಂಜುನಾಥ ಹೊಸಮನಿ ಮಾತನಾಡಿ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಶೇ.50 ರಷ್ಟು ಮಾತ್ರ 371ಜೆ ಅನುಷ್ಠಾನವಾಗಿದೆ. ಪೂರ್ಣ ಪ್ರಮಾಣದಲ್ಲಿ 371ಜೆ ಮೀಸಲಾತಿ ಜಾರಿಯಾಗಬೇಕು. ನಮ್ಮ ಭಾಗದ 41 ಶಾಸಕರು ಒಗ್ಗಟ್ಟಾಗಿ ಸದನದಲ್ಲಿ ಧ್ವನಿ ಎತ್ತಬೇಕು ಎಂದರು. ಉಪನ್ಯಾಸಕ ಶಂಕರ ಕರಪಡಿ ಆಶಯ ನುಡಿಗಳನ್ನಾಡಿದರು. ವಿವಿಧ ಸಾಹಿತಿಗಳು, ಗಣ್ಯರು ಉಪಸ್ಥಿತರಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷ ಹ.ಯ. ಈಟಿಯವರ್ ಜೀವನ ತರಂಗ (ಆತ್ಮಾವಲೋಕನ), ಶೇಖರಗೌಡ ಸರನಾಡಗೌಡರ ಅವರ ಭಾವದೊಳಗೆ ಭಾವವಾಗಿ ನಗುವ ಚೆಲ್ಲುವ ಕನಸು (ಕಥಾ ಸಂಕಲನ), ಡಾ. ನಾಗರಾಜ ಹೀರಾ ಅವರ ಹೆಜ್ಜೆ (ಕವನ ಸಂಕಲನ) ಜೇನ್ದನಿ ( ವಿಶೇಷ ಕಾವ್ಯ ಪ್ರಯೋಗ, ನಟರಾಜ ಸೋನಾರ ಅವರ ಸೃಷ್ಠಿಕರ್ತ (ಸಂಪಾದಿತ ಕೃತಿ), ರವೀಂದ್ರ ಬಾಕಳೆ ಅವರ ದೈವಸಂಕಲ್ಪ ಇತರ ಕೃತಿಗಳು (ಕಥಾ ಸಂಕಲನ), ಮೌನೇಶ ನವಲಹಳ್ಳಿಯವರ ನೀಲಿಹೊತ್ತಿಗೆ (ಕಾದಂಬರಿ), ದಿ. ಡಿ.ಜಿ.ಸನ್ನಿಯವರ ಸರದಾರ ನೀ ಸುಳಿಬೇಡ (ಕವನ ಸಂಕಲನ), ಚಿನ್ನನಗೌಡ ವಿ. ಪಾಟೀಲರವರ ಕಾವ್ಯ ಸಂಭ್ರಮ (ಕವನ ಸಂಕಲನ), ಸಂಗಮೇಶ ಗುಡಿಮನಿಯವರ ಬ್ರಹ್ಮಚಾರಿ ಬದುಕು (ಕಥಾ ಸಂಕಲನ), ಶೋಭಾ ಪ್ರಕಾಶ ಮಲ್ಕಿ ಒಡೆಯರ್ ಅವರ ಹತ್ತು ಹೆಜ್ಜೆ ಹಲವು ಗೆಜ್ಜೆ (ಸಂಪಾದಿತ ಕೃತಿ)ಪುಸ್ತಕಗಳು ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.
ಸಾಹಿತ್ಯ ಸಮ್ಮೇಳನದ ಬೆಳಗಿನ ಕಾರ್ಯಕ್ರಮಗಳು ಸಕಾಲಕ್ಕೆ ನಡೆಯಲಿಲ್ಲ. ಹೀಗಾಗಿ ಸಭೆ ಕಾರ್ಯಕ್ರಮ, ಸಂಕೀರ್ಣ ಗೋಷ್ಠಿ ಸಂಜೆ 6ಕ್ಕೆ ಮುಗಿದಿದ್ದರಿಂದ ಕವಿಗೋಷ್ಠಿ, ವಿವಿಧ ಸಾಧಕರಿಗೆ ಸನ್ಮಾನ, ಬಹಿರಂಗ ಅಧಿವೇಶನ, ಸಮಾರೋಪ ಸಮಾರಂಭ ಸರಿಯಾಗಿ ನಡೆಯಲಿಲ್ಲ. ಆಯೋಜಕರು ತರಾತುರಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು.
ಸಮ್ಮೇಳನದಲ್ಲಿ ಒಟ್ಟು 13 ಮಳಿಗೆ ಪ್ರಾರಂಭಿಸಲಾಗಿತ್ತು. ಹೂಲಗೇರಾ ಸಮಾಹಿಪ್ರಾ ಶಾಲೆಯಿಂದ ಪ್ರಾರಂಭಿಸಲಾಗಿದ್ದ ಶಿಕ್ಷಣ ಇಲಾಖೆಯ ಎಲ್ಲ ಕಾರ್ಯಕ್ರಮಗಳ ವಿವರ ನೀಡುವ ವಸ್ತು ಪ್ರದರ್ಶನ ವಿಶೇಷವಾಗಿತ್ತು. ಎರಡು ಪುಸ್ತಕ ಮಳಿಗೆ, ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆ, ವಿದ್ಯಾರ್ಥಿಗಳ ಚಿತ್ರಕಲಾ ಮಳಿಗೆ, ವಿಶ್ವಕರ್ಮ ಕುಶಲಕರ್ಮಿಗಳ ವಸ್ತು ಪ್ರದರ್ಶನ, ಆರೋಗ್ಯ ಹಾಗೂ ಅಂಚೆ ಇಲಾಖೆಯಿಂದ ಮಳಿಗೆಗಳನ್ನು ತೆರೆಯಲಾಗಿತ್ತು.
ಅನೇಕ ಸಾಹಿತ್ಯ ಸಮ್ಮೇಳನ ವಿವಿಧ ಕಾರ್ಯಕ್ರಮಗಳಲ್ಲಿ ಊಟದ ವ್ಯವಸ್ಥೆ ಸರಿ ಇರುವುದಿಲ್ಲ. ಆದರೆ, ಹೂಲಗೇರಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಬಂದವರೆಲ್ಲರಿಗೂ ಉಪಹಾರ, ಊಟದ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು.