

ಹನುಮಸಾಗರ: ವಿದ್ಯಾರ್ಥಿಗಳು ನಿರಂತರವಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಕೆ.ಬಿ.ತಳವಾರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಾಸ್ತವ ದಿನಗಳು ಶುಭವಾಗಿದ್ದು, ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಹಿಂದಿನ ದಿನಗಳಲ್ಲಿ ಹೆಚ್ಚಿನ ಸೌಕರ್ಯಗಳಿರಲಿಲ್ಲ. ಆಗ ಬಡತನದಿಂದ ಬಂದ ವಿದ್ಯಾರ್ಥಿಗಳೇ ಹೆಚ್ಚಿದ್ದರು. ಜೀವನದಲ್ಲಿ ಇತರರಿಗೆ ಮಾದರಿಯಾಗಿ ಬದುಕಬೇಕು. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮಾಹಿತಿ ಅಂಗೈಯಲ್ಲಿರುವ ಮೊಬೈಲ್‌ನಲ್ಲೇ ಲಭ್ಯವಾಗುತ್ತಿದ್ದು, ಈ ತಂತ್ರಜ್ಞಾನವನ್ನು ಸತ್ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ ಮಾತನಾಡಿ, ನಮ್ಮ ದೇಶದ ಶಿಕ್ಷಣ ಮಹತ್ವವನ್ನು ಪಡೆದುಕೊಂಡಿದೆ. ಪೂಜ್ಯನೀಯ ಹಾಗೂ ಆತ್ಮೀಯ ಭಾವನೆ ಮೂಡಿಸಿದ ಸಮ್ಮಿಲನ ಇದಾಗಿದೆ. ಬಸವಣ್ಣನವರ ಕಾಲದಿಂದಲೂ ಗುರುವಿನ ಸ್ಮರಣೆ ಮಾಡುತ್ತಾ ಬರುತ್ತಿದ್ದೇವೆ ಹಾಗೆಯೇ ಈ ಕಾರ್ಯಕ್ರಮ ಹಳೆ ನೆನಪು ಮೆಲುಕು ಹಾಕುವ, ಜೀವನದಲ್ಲಿನ ಹೊಸ ಚೈತನ್ಯ ನೆನಪು ಮಾಡುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ರಾಜೇಂದ್ರ ಪಂತ್ ಅಧ್ಯಕ್ಷತೆ ವಹಿಸಿದ್ದರು. ಕುಷ್ಟಗಿ ಬಿಇಒ ಸುರೇಂದ್ರ ಕಾಂಬಳೆ, ಯಲಬುರ್ಗಾ ಬಿಇಒ ಸೋಮಶೇಖರಗೌಡ ಪಾಟೀಲ್, ನಿವೃತ್ತ ಪ್ರಾಚಾರ್ಯರಾದ ಪಿ.ಬಿ.ತಳವಾರ, ಪಿ.ಎಚ್.ತಳವಾರ, ಬಿಆರ್‌ಪಿ ಡಾ.ಜೀವನಸಾಬ ವಾಲಿಕಾರ, ಉಪನ್ಯಾಸಕ ರಾಜುರಾಜನ್, ನಿವೃತ್ತ ಮುಖ್ಯಶಿಕ್ಷಕರಾದ ಜಿ.ವೈ.ಈಟಿಯವರ, ಪ್ರಭಾ ಪಂತ್, ನಾರಾಯಣಸ್ವಾಮಿ ದೇವಾಂಗಮಠ, ಲಕ್ಷ್ಮಣಾಚಾರ್ಯ ಹುನಗುಂದ, ಎನ್.ಎಸ್.ಗೋಟೂರ, ಸಂಗಯ್ಯ ಹಿರೇಮಠ, ಶಂಕರಪ್ಪ ಬಡಿಗೇರ, ವಾಸುದೇವ ಡಬೇರ, ಮೌನಪ್ಪ ಪತ್ತಾರ, ವೀರಪ್ಪ ಸಿನ್ನೂರ, ಮಲ್ಲನಗೌಡ ಗೌಡರ, ಸುವರ್ಣಾ ನಾಯಕ, ಶಕುಂತಲಾ ಹುಲಮನಿ, ಸರಸ್ವತಿಬಾಯಿ, ಸುನಂದಾದೇವಿ ಹಿರೇಮಠ, ಶ್ರೀನಿವಾಸ ನಾಯಕ, ವಿಜಯ ಮಹಾಂತೇಶ ಕುಷ್ಟಗಿ, ಗೌರಮ್ಮ ತಳವಾರ ಇತರರಿದ್ದರು.