

ಹನುಮಸಾಗರ: ಬಸ್ ನಿಲ್ದಾಣದಿಂದ ಇಳಕಲ್ ಹಾಗೂ ಗಜೇಂದ್ರಗಡ ಪಟ್ಟಣಕ್ಕೆ ಸಮಯಕ್ಕೆ ಸರಿಯಾಗಿ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಮಂಗಳವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಇಳಕಲ್ ಹಾಗೂ ಗಜೇಂದ್ರಗಡಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಇಳಕಲ್ ಹಾಗೂ ಗಜೇಂದ್ರಗಡ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲಾಖೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಹೊಸದಾಗಿ ಬಸ್ ಬಿಡಿ ಎನ್ನುತ್ತಿಲ್ಲ. ಇಳಕಲ್ ಪಟ್ಟಣಕ್ಕೆ ತೆರಳುವ ಐದಾರು ಬಸ್‌ಗಳು ನಿಗದಿತ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಎರಡು ತಾಸು ನಿಲ್ದಾಣದಲ್ಲೇ ಕಳೆಯಬೇಕು ಮತ್ತು ಶಾಲಾ-ಕಾಲೇಜಿನಿಂದ ಮರಳುವಾಗಲೂ ತಡವಾಗಿ ಬರುವ ಬಸ್‌ಗೆ ಸಾರ್ವಜನಿಕರ ಜತೆಯಲ್ಲಿ ನೂಕುನುಗ್ಗಲಿನಲ್ಲೇ ಹತ್ತಬೇಕು. ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಹೋಗದೆ ಮನೆಗೆ ಮರಳಿರುವ ಉದಾಹರಣೆಗಳಿವೆ ಎಂದು ಶಿವಕುಮಾರ ಭೋವಿ, ಸಂಗಮೇಶ, ರಜಾಕ್, ಮಣಿಕಂಠ, ಚೇತನ, ಸಿದ್ಧಾರ್ಥ, ಲಕ್ಷ್ಮೀ, ಲಲಿತಾ, ಪ್ರತಿಭಾ, ತುಳಸಿ, ಪ್ರವೀಣ ಕುಮಾರ, ಮಲ್ಲಿಕಾರ್ಜುನ, ತಿಪ್ಪಣ್ಣ, ಸಂಗಮೇಶ, ಬಸವರಾಜ, ನಾಗರಾಜ, ಪಲ್ಲವಿ, ಪವಿತ್ರಾ, ವಿಶ್ವನಾಥ, ವಿಜಯ, ವೀರೇಶ, ರಮೇಶ, ರಮ್ಯಾ, ಸಂಗಮ್ಮ, ಮಂಜುಳಾ, ಪಾರ್ವತಿ, ಪ್ರತಿಭಾ, ಪ್ರಶಾಂತ, ಭೀಮವ್ವ, ಸ್ವಪ್ನಾ, ಸೌಮ್ಯಾ ಮುಂತಾದ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು.
ನಂತರ ಸ್ಥಳಕ್ಕಾಗಮಿಸಿದ ಗ್ರಾಪಂ ಸದಸ್ಯ ಬಸವರಾಜ ದೇವಣ್ಣನವರ, ಡಿಪೋ ವ್ಯವಸ್ಥಾಪಕರು ವಿದ್ಯಾರ್ಥಿಗಳ ಮನವೊಲಿಸಿ, ಬಸ್ ಸಂಚಾರ ಪ್ರಾರಂಭಿಸಿದರು.