

ಹನುಮಸಾಗರ: ಶ್ರದ್ಧೆಯಿಂದ ಸತತವಾಗಿ ಓದಿದಾಗ ಮಾತ್ರ ಉನ್ನತ ಹುದ್ದೆ ಪಡೆಯಲು ಸಾಧ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ. ಜಗದೀಶಪ್ಪ ಹೇಳಿದರು.
ಸಮೀಪದ ಮಿಯ್ಯಪೂರ ಸಹಿಪ್ರಾ ಶಾಲೆಯ ವಿದ್ಯಾರ್ಥಿಗಳ ಮನೆ ಮನೆ ಗ್ರಂಥಾಲಯ ಸೋಮವಾರ ಉದ್ಘಾಟಿಸಿ ಮಾತನಾಡಿದರು. ಉಜ್ವಲ ಭವಿಷ್ಯ ರೂಪಿಸಲು ಮಕ್ಕಳ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸಿರುವುದು ಶ್ಲಾಘನೀಯ. ಆಧುನಿಕ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದ್ದು, ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಹೆಚ್ಚಿದೆ. ಮಕ್ಕಳು ನಿರಂತರವಾಗಿ ಪುಸ್ತಕ ಓದುವ ಹವ್ಯಾಸ ಹವ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು ಎಂದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳು ಕುತೂಹಲದಿಂದ ಕಲಿಯುವ ಆಸಕ್ತಿ ಹೊಂದಿರುತ್ತಾರೆ. ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವ ಕಾರ್ಯವನ್ನು ಪಾಲಕರು, ಶಿಕ್ಷಕರು ಮಾಡಬೇಕು. ಮಿಯ್ಯಪುರದ ಸಹಿಪ್ರಾ ಶಾಲೆಯ ವಿದ್ಯಾರ್ಥಿಗಳು ಮನೆಗಳಲ್ಲಿ 32 ಗ್ರಂಥಾಲಯ ನಿರ್ಮಿಸಿರುವುದು ಮಾದರಿ ಕಾರ್ಯ. ಇದಕ್ಕೆ ಸಹಕಾರ ನೀಡುತ್ತಿರುವ ಟಾಟಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಟಾಟಾ ಟ್ರಸ್ಟ್ ಅಧಿಕಾರಿ ಶಿವಕುಮಾರ ಯಾದವ ಮಾತನಾಡಿ, ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿ ಸತತವಾಗಿ ಓದುವುದರಿಂದ ಭವಿಷ್ಯದಲ್ಲಿ ಅದರ ಲಾಭ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಕಲಿಕಾ ಟಾಟಾ ಟ್ರಸ್ಟ್ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ, ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಎಂ., ಗ್ರಾಪಂ ಸದಸ್ಯರಾದ ಶರಣಗೌಡ ಮ್ಯಾಗೇರಿ, ಗವಿಸಿದ್ದಪ್ಪ ಸಿದ್ದಪ್ಪ ಕುದುರಿ, ಸಿಆರ್‌ಪಿ ಅಯ್ಯಪ್ಪ ಸುರುಳ, ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ, ಶಿಕ್ಷಣ ಪ್ರೇಮಿಗಳಾದ ರಾಜಕುಮಾರ ಕುಂಬಾರ, ಪುಂಡಲೀಕಪ್ಪ, ಶಿಕ್ಷಕರಾದ ನಾಗನಗೌಡ ಪೊಲೀಸ್ ಪಾಟೀಲ್, ಶಾಂತಾಬಾಯಿ ಪಟ್ಟಣಶೆಟ್ಟಿ ಇತರರಿದ್ದರು.