

ಹನುಮಸಾಗರ: ಗ್ರಾಮೀಣ ಭಾಗದಲ್ಲಿ ಜಲಜೀವನ ಮಿಷನ್ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ತೀವ್ರಗತಿಯಲ್ಲಿ ಮುಗಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹನುಮಸಾಗರ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಜವಾಬ್ದಾರಿ ಪ್ರತಿಯೊಬ್ಬ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮೇಲಿದೆ. ಕುಷ್ಟಗಿ ತಾಲೂಕಿನ ಮುದೇನೂರು ಹಾಗೂ ಹೂಲಗೇರಾ ಗ್ರಾಮಗಳನ್ನು ಸಂಸದರ ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಇವೆರಡೂ ಗ್ರಾಮಗಳಲ್ಲಿ ಸರ್ವೇ ಕಾರ್ಯ ಮಾಡಲಾಗಿದ್ದು, ನೆಡುತೋಪು, ಗೋದಾಮು, ಅಂಗನವಾಡಿ, ಸಿಸಿ ರಸ್ತೆ , ಚರಂಡಿ, ಸ್ಮಶಾನ ಅಭಿವೃದ್ಧಿ, ಶೌಚಗೃಹ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂದಾಜು 10 ಕೋಟಿ ರೂ. ಹೆಚ್ಚು ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ತಾಪಂ ಇಒ ಪಂಪಾವತಿ ಹಿರೇಮಠ, ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಪಿಡಿಒ ನಿಂಗಪ್ಪ ಮೂಲಿಮನಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ದಿಶಾ ಸಮಿತಿ ಸದಸ್ಯ ದೊಡ್ಡಬಸವಗೌಡ ಪಾಟೀಲ್ ಬಯ್ಯಪುರ ಇತರರಿದ್ದರು.