ಆರೋಗ್ಯವಾಗಿರಲು ಸ್ವಚ್ಛತೆ ಕಾಪಾಡಿ: ತುಮರಿಕೊಪ್ಪ ಗ್ರಾಪಂ ಅಧ್ಯಕ್ಷ ಹನುಮಂತ ಮೂಗನೂರು ಸಲಹೆ

3 Hanumasagara 2
Published on

ಹನುಮಸಾಗರ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತುಮರಿಕೊಪ್ಪ ಗ್ರಾಪಂ ಅಧ್ಯಕ್ಷ ಹನುಮಂತ ಮೂಗನೂರು ಹೇಳಿದರು.

ತುಮರಿಕೊಪ್ಪ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಕುಷ್ಟಗಿ ಜನಜಾಗೃತಿ ಕಲಾರಂಗ ಸಂಸ್ಥೆ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯವಾಗಿರಲು ಸಾರ್ವಜನಿಕರು ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛವಿಟ್ಟುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಎರಡು ವಾರಕ್ಕಿಂತ ಕಫ ಇರುವುದು, ಕಫದಲ್ಲಿ ರಕ್ತ ಬೀಳುವುದು, ಸಂಜೆ ಸಮಯದಲ್ಲಿ ಜ್ವರ, ಎದೆ ನೋವು ಕಂಡುಬಂದಾಗ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಹೆಣ್ಣು ಮಕ್ಕಳು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.

ಬಳಿಕ ವೆಂಕಟಾಪುರ, ಹನುಮನಾಳ, ಬಿಳೆಕಲ್, ಮಿಟ್ಟಲಕೋಡ, ಗ್ರಾಮಗಳಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆ ಕಲಾವಿದರು ಬೀದಿನಾಟಕ ಮೂಲಕ ಜಾಗೃತಿ ಮೂಡಿಸಿದರು. ರಾಜ್ಯಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ, ಆರೋಗ್ಯ ಇಲಾಖೆಯ ಸಂಗಮೇಶ, ಕಲಾವಿದರಾದ ವೀರಯ್ಯಸ್ವಾಮಿ, ಸುಕುಮನಿ ಗಡಿಗಿ, ಮರಿಸ್ವಾಮಿ, ಭೀಮಪ್ಪ, ಗೌರಮ್ಮ, ಚನ್ನಕ್ಕ, ಶಿವಣ್ಣ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net