ಸಮಸ್ಯೆ ಹೇಳಿಕೊಂಡರಷ್ಟೇ ಪರಿಹಾರ

Untitled design(22)
Published on

ಹನುಮಸಾಗರ: ವಿದ್ಯಾರ್ಥಿಗಳು ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಅಡವಿಭಾವಿ ಪಿಡಿಒ ಶಿವಪುತ್ರಪ್ಪ ಬರಿದೇಲಿ ಹೇಳಿದರು.

ಸಮೀಪದ ಮಿಯ್ಯಪೂರ ಸಹಿಪ್ರಾ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಡವಿಭಾವಿ ಗ್ರಾಪಂ ವ್ಯಾಪ್ತಿಯ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಾತನಾಡಿದರು. ಮಕ್ಕಳು ಭಯವಿಲ್ಲದೆ ಸಮಸ್ಯೆಗಳನ್ನು ಹೇಳಿಕೊಂಡರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಮಕ್ಕಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಈ ಸಭೆ ಕೆಲಸ ಮಾಡುತ್ತದೆ ಎಂದರು.

ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ ಮಾತನಾಡಿ, ಮಕ್ಕಳ ಭೌತಿಕ ಬೆಳವಣಿಗೆಗೆ ಪೂರಕವಾದ ಆಟ-ಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು, ಶಾಲೆಗಳಲ್ಲಿ ಕುಡಿವ ನೀರು, ಶೌಚಗೃಹ, ಹೆಣ್ಣು ಮಕ್ಕಳ ಪೋಷಣೆ ಮತ್ತು ರಕ್ಷಣೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮಕ್ಕಳ ಜೀತ ಪದ್ಧತಿ, ಮಕ್ಕಳ ಮೇಲಿನ ತಾರತಮ್ಯ ನಿವಾರಣೆ ಮುಂತಾದ ವಿಷಯಗಳ ಕುರಿತು ಕಾಳಜಿ ವಹಿಸಬೇಕಿದೆ. ಪಾಲಕರು 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ, ಸದಸ್ಯರಾದ ಶರಣಗೌಡ ಮ್ಯಾಗೇರಿ, ಗವಿಸಿದ್ದಪ್ಪ ಕುದರಿ, ದುರಗಪ್ಪ ಕಟ್ಟಿಮನಿ, ಯಮನೂರಪ್ಪ ದಿಂಗಿ, ಕಾನ್‌ಸ್ಟೇಬಲ್ ಹನುಮಂತಪ್ಪ ಬಿ., ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಕನಕಪ್ಪ ಎಂ., ಮುಖ್ಯ ಶಿಕ್ಷಕರಾದ ಶಂಕ್ರಪ್ಪ ರಾಠೋಡ, ಮಂಜಪ್ಪ ಪೂಜಾರಿ, ಬಸವರಾಜ ಕೊಡಗಲಿ, ವೀರಪ್ಪ ತೋಟದ, ಮಲ್ಲಪ್ಪ ಗೊಂದಿ, ಸಹಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net