

ಹನುಮಸಾಗರ: ಇಲ್ಲಿನ ಗ್ರಾಪಂನಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಆರಂಭಿಸಿ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಗ್ರಾಪಂ ಸದಸ್ಯರು ಪಿಡಿಒ ಹಾಗೂ ಅಧ್ಯಕ್ಷರಿಗೆ ಒತ್ತಾಯಿಸಿದರು.ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಾರದಲ್ಲಿ ನರೇಗಾ ಕೆಲಸ ಆರಂಭವಾಗುವಂತೆ ನೋಡಿಕೊಳ್ಳಬೇಕು. 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ಸಿದ್ಧಗೊಂಡಿದ್ದು, ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿ, ಈಗಾಗಲೇ ಕಾಯಕ ಬಂಧುಗಳಿಗೆ ಕೂಲಿಕಾರರ ಅರ್ಜಿಗಳನ್ನು ಒದಗಿಸುವಂತೆ ತಿಳಿಸಲಾಗಿದೆ. ಮುಂದಿನ ವಾರದಲ್ಲಿ ಕೆಲಸ ಆರಂಭಿಸಲಾಗುವದು ಎಂದರು.ಇದೇ ವೇಳೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗುರಿಗೆ ಅನುಗುಣವಾಗಿ ದಾಖಲಿಸಿದ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲನೆ ಮಾಡಿ ಅನುಮೋದಿಸುವುದು ಹಾಗೂ ಹೊಸ ಫಲಾನುಭವಿಗಳನ್ನು ದಾಖಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡ್ಪಪನವರ, ಉಪಾಧ್ಯಕ್ಷೆ ಹನುಮವ್ವ ಕಂದಗಲ್, ಪಿಡಿಒ ನಿಂಗಪ್ಪ ಮೂಲಿಮನಿ, ಕಾರ್ಯದರ್ಶಿ ಅಮರೇಶ ಕರಡಿ, ನರೇಗಾ ಇಂಜಿನಿಯರ್ ಗುರುಲಿಂಗಪ್ಪ ಅಂಗಡಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.