ವಾಟ್ಸಾಪ್‌ನಲ್ಲಿ ಕರೆಂಟ್ ಕಡಿತದ ಮಾಹಿತಿ

GESCOM Branch
ಹನುಮಸಾಗರದ ಜೆಸ್ಕಾಂ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಟ್ಸಾಪ್ ಗ್ರೂಪ್‌ನಲ್ಲಿ ಮಾಹಿತಿ ಹಾಕಿರುವುದು.
Published on

ಹನುಮಸಾಗರ: ಇಲ್ಲಿನ ಜೆಸ್ಕಾಂ ಕಚೇರಿ ಸಿಬ್ಬಂದಿ ವಾಟ್ಸಾಪ್ ಗ್ರೂಪ್ ರಚಿಸಿ, ಅದರಲ್ಲಿ ವಿದ್ಯುತ್ ಕಡಿತಕ್ಕೆ ಕಾರಣಗಳು ಮತ್ತು ಸರಬರಾಜಿನ ಬಗ್ಗೆ ಮಾಹಿತಿ ಹಾಕುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಾಮಾನ್ಯವಾಗಿ ಇಂದಿನ ದಿನಮಾನಗಳಲ್ಲಿ ಕರೆಂಟ್ ಹೋಗುತ್ತಿದಂತೆ ಲೈನ್‌ಮನ್‌ಗಳನ್ನು ಬಾಯಿಗೆ ಬಂದಂತೆ ಬೈಯ್ಯುವವರೇ ಹೆಚ್ಚು. ಆದರೆ, ಹನುಮಸಾಗರದಲ್ಲಿ ಕರೆಂಟ್ ಹೋಗುತ್ತಿದಂತೆ ಮೊಬೈಲ್ ಕೈಗೆತ್ತಿಕೊಂಡು ವಾಟ್ಸಾಪ್ ನೋಡುತ್ತಾರೆ. ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ದುರಸ್ತಿ ಕಾರ್ಯ ಕೈಗೊಂಡಾಗ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಿಬ್ಬಂದಿಗೆ ಕಷ್ಟವಾಗುತ್ತಿತ್ತು. ಅನೇಕರು ಕರೆ ಮಾಡುತ್ತಿದ್ದರು. ಎಲ್ಲರ ಕರೆ ಸ್ವೀಕರಿಸಲು ಆಗುತ್ತಿರಲಿಲ್ಲ. ಕೆಲವೊಮ್ಮೆ ಜನ ಕಚೇರಿಗೆ ಬಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಉಂಟು. ಇಂಥ ಸಮಸ್ಯೆಗಳನ್ನು ಶಮನ ಮಾಡಲು ಜೆಸ್ಕಾಂ ಶಾಖಾಧಿಕಾರಿ ‘ಜೆಸ್ಕಾಂ ಹನುಮಸಾಗರ (ಪಟ್ಟಣ) ವಿದ್ಯುತ್ ಮಾಹಿತಿ’ ಎಂಬ ಗ್ರೂಪ್ ರಚಿಸಿಕೊಂಡು ಮೆಸೇಜ್‌ಗಳನ್ನು ಅಪ್ಡೇಟ್ ಮಾಡಲಾಗುತ್ತದೆ.

ದುರಸ್ತಿ ಸಂದರ್ಭದಲ್ಲಿ ಸಂದೇಶ: ದುರಸ್ತಿ ಕೆಲಸಗಳಿದ್ದಲ್ಲಿ ವಿದ್ಯುತ್ ಕಡಿತಗೊಳಿಸುವ ಕುರಿತು ಸಂದೆಶ ಕಳಿಸಲಾಗುತ್ತದೆ. ಜತೆಗೆ ಯಾವ ಸಮಯಕ್ಕೆ ವಿದ್ಯುತ್ ಬರುತ್ತದೆ. ಎಲ್ಲಿ ದುರಸ್ಥಿ ಕಾರ್ಯ ನಡೆದಿದೆ ಎಂಬ ಮಾಹಿತಿ ಹಾಗೂ ಫೋಟೊಗಳನ್ನು ಹಂಚಿಕೊಳ್ಳಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಶೀಘ್ರದಲ್ಲಿ ಮಾಹಿತಿ ಲಭ್ಯವಾಗುತ್ತದೆ.

ಗ್ರಾಪಂ ವ್ಯಾಪ್ತಿಗೊಂದು ಗ್ರೂಪ್: ಹನುಮಸಾಗರ ಜೆಸ್ಕಾಂ ಕಚೇರಿ ವ್ಯಾಪ್ತಿಗೆ ಒಳಪಡುವ ಕಾಟಾಪುರ, ಕಬ್ಬರಗಿ, ಅಂಟರ ಠಾಣಾ, ಹೂಲಗೇರಿ, ಬೆನಕನಾಳ ಗ್ರಾಪಂಗಳಿಗೆ ಒಂದರಂತೆ ವಾಟ್ಸಾಪ್ ಗ್ರೂಪ್ ರಚಿಸಿ ಸ್ಥಳೀಯರ ಮೊಬೈಲ್ ಸಂಖ್ಯೆಗಳನ್ನು ಸೇರಿಸಿ ವಿದ್ಯುತ್ ಕಡಿತ, ಕಡಿತಕ್ಕೆ ಕಾರಣಗಳು, ಸರಬರಾಜಿನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ರೈತರಿಗೂ ಅನುಕೂಲ: ಪಂಪ್‌ಸೆಟ್ ಹೊಂದಿರುವ ರೈತರ ಮೊಬೈಲ್ ನಂಬರ್‌ಗಳಿರುವ ಒಂದು ಗ್ರೂಪ್ ರಚಿಸಲಾಗಿದೆ. ಇದರಲ್ಲಿ ಮಾಹಿತಿ ಹಂಚಿಕೊಳ್ಳುವುದರಿಂದ ರೈತರು ಪಂಪ್‌ಸೆಟ್‌ಗಳ ಮುಂದೆ ಕಾಯುವುದು ತಪ್ಪಿದೆ. ಅಲ್ಲದೆ, ರೈತರು ತಮ್ಮ ಹೊಲಗಳಲ್ಲಿ ಸಮಸ್ಯೆ ಉಂಟಾದಾಗ, ಹೊಲಗಳಿಗೆ ಹೋಗುವ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿರುವುದು, ಮರ ಬಿದ್ದಿರುವುದು ಕಂಡರೆ ಲೈನ್‌ಮನ್‌ಗಳಿಗೆ ಮಾಹಿತಿ ನೀಡುತ್ತಾರೆ.

ಬಾಕಿ ಬಿಲ್ ಪಾವತಿಗಾಗಿ ಅರಿವು: ಕೇವಲ ವಿದ್ಯುತ್ ಕಡಿತ, ಸರಬರಾಜು, ದುರಸ್ತಿಗೆ ಸಂಬಂಧಿಸಿದ ಮಾಹಿತಿ ಮಾತ್ರ ಅಲ್ಲದೆ, ಗ್ರೂಪ್‌ನಲ್ಲಿ ಸಾರ್ವಜನಿಕರಿಗೆ ವಿದ್ಯುತ್‌ನಿಂದ ಉಂಟಾಗುವ ಅಪಾಯಗಳ ಬಗ್ಗೆ ಮಾಹಿತಿ ಹಾಗೂ ಬಾಕಿ ಬಿಲ್ ಪಾವತಿಗಾಗಿ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯುತ್ ತಂತಿಗೆ ಬಟ್ಟೆ ಹಾಕುವುದು. ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು, ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಅಳವಡಿಸುವುದು, ಮನೆಯನ್ನು ನಿರ್ಮಿಸಿಕೊಳ್ಳುವಾಗ ನಿಯಮಗಳ ಪ್ರಕಾರ ವಿದ್ಯುತ್ ಮಾರ್ಗದ ಅಂತರವನ್ನು ಕಾಯ್ದುಕೊಳ್ಳುವುದು, ಮನೆಯಲ್ಲಿ ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನು ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳ ಸಹಿತ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಕಲಾಗುತ್ತದೆ.

ಜೆಸ್ಕಾಂ ಶಾಖೆಯ ಎಲ್ಲ ಸಿಬ್ಬಂದಿ ಹಾಗೂ ಜನರ ಸಹಕಾರದಿಂದ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಗ್ರೂಪ್ ರಚಿಸಿದಾಗಿನಿಂದ ಜನರಿಂದ ಫೋನ್ ಕರೆಗಳು ಬರುವುದು ಕಡಿಮೆಯಾಗಿವೆ. ಸಿಬ್ಬಂದಿ ಗ್ರಾಹಕರ ಮನೆಗೆ ಹೋದಾಗ ಬಾಕಿ ಬಿಲ್ ಪಾವತಿಸಲು ಸಹಕರಿಸಬೇಕು.

ಮೌಲಸಾಬ್

ಕಿರಿಯ ಅಭಿಯಂತರರು. ಜೆಸ್ಕಾಂ ಕಚೇರಿ. ಹನುಮಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net