

ಹನುಮಸಾಗರ: ಗ್ರಾಮದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪ್ರಗತಿಗೆ ಶಿಕ್ಷಕರು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಬೆಂಗಳೂರು ಪಿಎಸ್‌ಐ ಪರಶುರಾಮ ವಣಗೇರಿ ಹೇಳಿದರು.
ಸಮೀಪದ ಗುಡದೂರಕಲ್ಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗಣಕಯಂತ್ರ ಕೊಠಡಿ ಉದ್ಘಾಟನೆ ಹಾಗೂ ಅಡುಗೆ ಸಹಾಯಕಿ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಸ್ಥರು ಊರಿನ ಶಾಲೆಗಳ ಅಭಿವೃದ್ಧಿಗೆ ಸಹಕರಿಸಬೇಕು. ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೋಧನೆ ಮಾಡಲು ಬೇಕಾಗುವ ಸಾಮಗ್ರಿಗಳ ಖರೀದಿಗೆ ಕೈಲಾದಷ್ಟು ಸಹಾಯ ಮಾಡಲು ಮುಂದೆ ಬರಬೇಕು. ಸೌಲಭ್ಯ ನೀಡಿದಾಗ ಮಾತ್ರ ಬಡ ಪ್ರತಿಭೆಗಳು ಅರಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಬೇಕು ಎಂದರು.
ನಿವೃತ್ತಿ ಹೊಂದಿದ ಮುಖ್ಯ ಬಿಸಿಯೂಟ ತಯಾರಕಿ ಕಲ್ಲಮ್ಮ ನಂದಿಕೋಲಮಠ ಅವರನ್ನು ಸನ್ಮಾನಿಸಲಾಯಿತು. ಪಿಎಸ್‌ಐ ಪರಶುರಾಮ ವಣಗೇರಿ ಅವರು ತಾವು ಕಲಿತ ಶಾಲೆಗೆ 5 ಕಂಪ್ಯೂಟರ್ ನೀಡಿದರು.