ಕೊಪ್ಪಳ ಜಿಲ್ಲಾ ನುಡಿಜಾತ್ರೆ ಒಂದು ದಿನ ಮುಂದೂಡಿಕೆ: ಮಾ.4ರ ಬದಲು 5 ಮತ್ತು 6ರಂದು ಆಯೋಜನೆ

Published on

ಹನುಮಸಾಗರ: ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿದ್ದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಂದು ದಿನ ಮುಂದೂಡಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪಾಟೀಲ್ ಹೇಳಿದರು.


ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಜಿಲ್ಲಾ ಸಮ್ಮೇಳನಕ್ಕೆ ಸಂಬಂಧಪಟ್ಟ ಬಹುತೇಕ ಕಾರ್ಯಗಳು ಮುಗಿದಿವೆ. ಮಾ.4ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ರಾಜ್ಯಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಇರುವುದರಿಂದ ಮಾ.4ರ ಬದಲಿಗೆ ಮಾ.5 ಮತ್ತು 6ರಂದು ಸಮ್ಮೇಳನದ ದಿನಾಂಕ ಬದಲಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸದಾಗಿ ಪರೀಕ್ಷಾ ವೇಳಾಪಟ್ಟಿ ಹೊರಡಿಸಿದೆ. ಹೀಗಾಗಿ ಸಮ್ಮೇಳನ ನಡೆಯುವ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿಯೇ ಎರಡು ಪ್ರೌಢ ಶಾಲೆಗಳಿದ್ದು ಮಾ.4 ರಂದು ಪರೀಕ್ಷೆ ನಡೆಸಲು ತೊಂದರೆ ಆಗುವುದನ್ನು ಮನಗಂಡು ಸಮ್ಮೇಳನ ಮುಂದೂಡಲಾಗಿದೆ. ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಸಮ್ಮೇಳನದ ಪೆಂಡಾಲ್‌ನ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿ ಒಪ್ಪಿಕೊಂಡಿದ್ದು, ಉಳಿದಂತೆ ಸಂಪನ್ಮೂಲಗಳ ಕ್ರೋಡೀಕರಣ ಮಾಡಬೇಕಾಗಿದೆ ಎಂದರು.

ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಜಿಲ್ಲಾ ಕಾರ್ಯದರ್ಶಿ ರಮೇಶ ಕುಲಕರ್ಣಿ, ಸ್ಥಳೀಯ ಘಟಕದ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಪಿಡಿಒ ದೇವೇಂದ್ರಪ್ಪ ಕಮತರ, ಕಸಾಪ ಪದಾಧಿಕಾರಿಗಳಾದ ಅಬ್ದುಲ್ ಕರೀಮ್ ವಂಟೆಳಿ, ವಾಲ್ಮೀಕಿ ಎಚ್.ಯಕ್ಕರನಾಳ, ಮಲ್ಲಪ್ಪ ಕುದರಿ, ಚಂದಪ್ಪ ಹಕ್ಕಿ, ಅಮರೇಶ ತಮ್ಮಣ್ಣವರ, ಬಸವರಾಜ ದಟ್ಟಿ, ಎಸ್.ಜಿ.ಕಡೇಮನಿ, ನಿಂಗಪ್ಪ ಗುನ್ನಾಳ, ರಾಮಚಂದ್ರ ಬಡಿಗೇರ, ಶಿವಬಸಪ್ಪ, ಸಂಗಮೇಶ ಬ್ಯಾಳಿ, ಬಸಮ್ಮ ಹಿರೇಮಠ, ರೇಣುಕಾ ಪುರದ, ಸುನೀತಾ ಕೋಮಾರಿ, ರಾಮಚಂದ್ರ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net