

ಹನುಮಸಾಗರ: ಕುಟುಂಬ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಶ್ರೀ ಕ್ಷೇತ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ಚಳಗೇರಾ ಗ್ರಾಮದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಶ್ರೀ ಕ್ಷೇತ ಧರ್ಮಸ್ಥಳ ಯೋಜನೆ ನಿರಂತರ ಸಹಾಯ ಮಾಡುತ್ತಿದೆ. ಹತ್ತು ಮನಸ್ಸುಗಳು ಒಂದಾಗಿ ದುಡಿದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸಾಹಿತಿ ರಾಮಚಂದ್ರ ಬಡಿಗೇರ ಮಾತನಾಡಿ, ಧರ್ಮ ಎಂಬ ಬೀಜ ಪಡೆದು ನಮ್ಮ ಬಾಳ ಭೂಮಿಯಲ್ಲಿ ಬಿತ್ತಿ, ಸತ್ತಕರ್ಮಗಳಿಂದ ಪೋಷಿಸುತ್ತಿದ್ದರೆ ಮಾತ್ರ ಅದು ನಮ್ಮನ್ನು ರಕ್ಷಿಸಬಲ್ಲದು. ಧರ್ಮದ ನಿಜ ಸ್ವರೂಪ ಅರಿತರೆ ಅದರ ಫಲಗಳನ್ನು ಅನುಭವಿಸಲು ಸಾಧ್ಯ ಎಂದರು.
ಅರಳೆಲಿಕಟ್ಟಿಮನಿ ಬ್ರಹ್ಮನಮಠದ ವೀರಸಂಗಮೇಶ್ವರ ಶಿವಾಚಾರ್ಯರು, ತಾಲೂಕು ಯೋಜನಾಧಿಕಾರಿ ಶೇಖರ ನಾಯಕ, ಮುಖಂಡ ಸೋಮಪ್ಪ ಕಲ್ಲಡೋಣಿ, ಗ್ರಾಪಂ ಸದಸ್ಯರಾದ ಶರಣಬಸವ ಗಾಡಗೊಳ್ಳಿ, ಶಾಂತಾ ಮಾಲಿಪಾಟೀಲ್, ಉಮಾ ಕ್ವಾಟಿಮ್ಯಾಗಿನ್, ಪ್ರಕಾಶ ಗಾಣಗೇರ, ಸಂಗಪ್ಪ ಗುರಿಕಾರ, ವಿಜಯಲಕ್ಷ್ಮೀ ಶೆಟ್ಟರ, ನಾಗರಾಜ ಹಿರೇಮಠ, ನಾಗಪ್ಪ ವಡ್ಡರ, ಮಹಾದೇವಿ ನಾಯಕ, ಪದ್ಮಾವತಿ ಪಾತಪ್ಪನವರ, ಮೇಲ್ವಿಚಾರಕರಾದ ಪ್ರವೀಣ, ಪ್ರಕಾಶ ಬಡಿಗೇರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ, ಪ್ರತಿನಿಧಿಗಳಾದ ಶೋಭಾ, ಆರತಿ ಸೊಪ್ಪಿಮಠ ಇತರರಿದ್ದರು.