ಎಲ್ಲ ಶಾಲೆಗೂ ಶುದ್ಧ ನೀರು ಪೂರೈಕೆ; ಪಿಡಿಒ ಶರಣಮ್ಮ ಕುರ್ನಾಳ ಹೇಳಿಕೆ

30112022 hanumasagar grama sabhe
Published on

ಹನುಮಸಾಗರ: ಗ್ರಾಮದ ಎಲ್ಲ ಶಾಲೆಗಳಿಗೂ ಜೆಜೆಎಂ ಯೋಜನೆಯಡಿ ಶುದ್ಧ ಕುಡಿವ ನೀರು ಒದಗಿಸಲಾಗುವುದು ಎಂದು ಪಿಡಿಒ ಶರಣಮ್ಮ ಕುರ್ನಾಳ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಹಾಗೂ ಗ್ರಾಪಂ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾವರಣ ಸಂಜೆಯಾದರೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ. ಇಲ್ಲಿ ಕುಡಿಯುವುದು, ತಿನ್ನುವುದು, ಮಲ-ಮೂತ್ರ ವಿಸರ್ಜನೆ ಸಾಮಾನ್ಯವಾಗಿದೆ. ಬಹಳಷ್ಟು ಬಾರಿ ಶಾಲಾ ಕೊಠಡಿಯಲ್ಲೇ ಮಲ ವಿಸರ್ಜನೆ ಮಾಡಲಾಗಿದೆ. ಮದ್ಯದ ಬಾಟಲಿ, ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಬೀಸಾಡಲಾಗುತ್ತಿದೆ. ಶೀಘ್ರವೇ ಕಾಂಪೌಂಡ್ ನಿರ್ಮಿಸಿ ಅದಕ್ಕೆ ಮುಳ್ಳುತಂತಿ ಅಳವಡಿಸುವ ಮೂಲಕ ಶಾಲೆಗೆ ಭದ್ರತೆ ಒದಗಿಸಬೇಕು. ಶಾಲಾವರಣದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಶೀಘ್ರವೇ ಉದ್ಘಾಟಿಸಬೇಕು. ಸ್ಕೂಲ್ ಮುಂಭಾಗದ ರಸ್ತೆಗೆ ಹಂಪ್ಸ್ ಅಳವಡಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮನವಿ ಮಾಡಿದರು.

ಕುರಬಗೇರಾ ಸಮಾಹಿಪ್ರಾ ಶಾಲೆಯ ಮಕ್ಕಳು, ನಮಗೆ ಆಟವಾಡಲು ಮೈದಾನವಿಲ್ಲ. ಗ್ರಾಪಂನಿಂದ ಜಾಗ ನೀಡಿ ಮೈದಾನ ನಿರ್ಮಿಸಿಕೊಡುವಂತೆ ಕೋರಿಕೊಂಡರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ವೈದ್ಯಾಧಿಕಾರಿ ವಿನಾಯಕ ಪಟ್ಟಣಶೆಟ್ಟಿ, ಎಸ್‌ಡಿಒ ವೀರನಗೌಡ ಪಾಟೀಲ್, ಸಿಆರ್‌ಪಿ ಮಂಜುನಾಥ ಪೂಜಾರ, ಗ್ರಾಪಂ ಸದಸ್ಯರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net