

ಹನುಮಸಾಗರ: ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡದೇ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಂಪನ್ಮೂಲ ಶಿಕ್ಷಕಿ ಶಾಂತಾಬಾಯಿ ಪಟ್ಟಣಶೆಟ್ಟಿ ಹೇಳಿದರು.
ಸಮೀಪದ ಮಿಯ್ಯಪೂರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಬಾಲ್ಯವಿವಾಹ ಹಾಗೂ ಡ್ರಗ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವುದು, ಸಮುದಾಯ ಪಾಲ್ಗೊಳ್ಳುವಿಕೆ ಬಲಪಡಿಸುವುದು ಅವಶ್ಯಕವಾಗಿದೆ. ಸಮುದಾಯದ ನಾಯಕರು, ಗ್ರಾಮ ಪಂಚಾಯಿತಿಗಳು, ಸ್ವಯಂಸೇವಾ ಸಂಘಗಳ ಸಹಯೋಗದೊಂದಿಗೆ ಬಾಲ್ಯ ವಿವಾಹ ತಡೆಗಟ್ಟುವ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ವಿಜ್ಞಾನ ಶಿಕ್ಷಕ ಪರಶುರಾಮಪ್ಪ ನಾಗಣ್ಣನವರ್ ಮಾತನಾಡಿ, ತಂಬಾಕು, ಗುಟ್ಕಾ, ಮದ್ಯಪಾನಕ್ಕೆ ಸಂಬಂಧಿಸಿದ ವ್ಯಸನಕಾರಿ ವಸ್ತುಗಳಿಂದ ಮಕ್ಕಳು ದೂರ ಇರಬೇಕು. ಮಕ್ಕಳಿಗೆ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಕನಕಪ್ಪ, ಗ್ರಾಪಂ ಸದಸ್ಯರಾದ ಶರಣೇಗೌಡ ಮ್ಯಾಗೇರಿ, ಗವಿಸಿದ್ದಪ್ಪ ಕುದುರಿ, ಮುಖಂಡರಾದ ಶರಣಪ್ಪ ಮಿಯಾಪುರ, ಭೀಮೇಶ ಮಿಯಾಪುರ, ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ ಶಿಕ್ಷಕರಾದ ನಾಗನಗೌಡ ಪೊಲೀಸ್ ಪಾಟೀಲ್, ಲಕ್ಷ್ಮೀ ವಾಲಿಕಾರ, ಸಂಗಮ್ಮ ಮಣ್ಣೇರಿ, ಲಕ್ಷ್ಮೀ ಮಾಲಿಪಾಟೀಲ, ಸಿದ್ದಮ್ಮ ರಾಮವಾಡಗಿ ಇತರರಿದ್ದರು.