ಬಿಸಿಯೂಟ ಜಾಗ್ರತೆಯಿಂದ ತಯಾರಿಸಲು ಎಸ್ಡಿಎಂಸಿ ಉಪಾಧ್ಯಕ್ಷ ಸೂಚಪ್ಪ ದೇವರಮನಿ ಸೂಚನೆ

031221 Hanumasagara Govt School Visit
ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ಸೂಚಪ್ಪ ದೇವರಮನಿ ಶುಕ್ರವಾರ ಬಿಸಿಯೂಟ ತಯಾರಿಕೆ ಪರಿಶೀಲಿಸಿದರು.
Published on

ಹನುಮಸಾಗರ: ಬಿಸಿಯೂಟವನ್ನು ಬಹಳ ಜಾಗ್ರತೆಯಿಂದ ತಯಾರಿಸಿ ಎಂದು ಅಡುಗೆಯವರಿಗೆ ಎಸ್ಡಿಎಂಸಿ ಉಪಾಧ್ಯಕ್ಷ ಸೂಚಪ್ಪ ದೇವರಮನಿ ಸೂಚಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ತಯಾರಿಸಲು ಬಳಸುವ ದವಸ, ಧಾನ್ಯ ಮತ್ತು ಅಡುಗೆ ಪರಿಶೀಲಿಸಿ ಮಾತನಾಡಿದರು. ಇತ್ತೀಚಿಗೆ ನಿಡಶೇಸಿ ಗ್ರಾಮದ ವಸತಿ ಶಾಲೆಯಲ್ಲಿ ಉಪಹಾರ ತಯಾರಿಕೆಯಲ್ಲಿ ಸಮಸ್ಯೆಯಾಗಿದ್ದರಿಂದ ಮಕ್ಕಳು ತೊಂದರೆ ಅನುಭವಿಸಬೇಕಾಯಿತು. ಸಮಸ್ಯೆ ನಂತರ ಪರಿಹಾರ ಹುಡುಕುವ ಬದಲಿಗೆ ಅಡುಗೆ ತಯಾರಿಸುವಾಗ ದವಸ, ಧಾನ್ಯಗಳನ್ನು ಸರಿಯಾಗಿ ಸ್ವಚ್ಛ ಮಾಡಿ ಜಾಗ್ರತೆಯಿಂದ ಅಡುಗೆ ತಯಾರಿಸಬೇಕು. ಶಿಕ್ಷಕರು ಅಡುಗೆ ತಯಾರಿ ಬಗ್ಗೆ ಸ್ವಲ್ಪ ಗಮನ ಹರಿಸಬೇಕೆಂದರು.

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ತಯಾರಿಸಲು ಅಗತ್ಯ ಸಾಮಗ್ರಿಗಳ ಕೊರತೆ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಅಡುಗೆದಾರರು ಗಮನಕ್ಕೆ ತಂದರು. ಕೂಡಲೇ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತೆ ತಾಲೂಕಾ ಅಕ್ಷರ ದಾಸೋಹದ ಅಧಿಕಾರಿಗೆ ಕರೆ ಮಾಡಿ ಒತ್ತಾಯಿಸಿದರು. ಅಗತ್ಯ ಸಾಮಗ್ರಿಗಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಶಿಕ್ಷಕರಿಗೆ ತಿಳಿಸಿದರು. ಮುಖ್ಯ ಶಿಕ್ಷಕಿ ರಾಯಮ್ಮ ಉಕ್ಕಲಿ, ಶಿಕ್ಷಕರು, ಸಿಬ್ಬಂದಿ ಮತ್ತು ಅಡುಗೆ ತಯಾರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net