

ಹನುಮಸಾಗರ: ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಬೇಕೆಂದು ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಹಳೇ ಭವನದಲ್ಲಿ ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸ್ಪಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದ್ದು, ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಅನೇಕ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಸಮಾಜದಲ್ಲಿ ಪ್ರಗತಿಯತ್ತ ಸಾಗಬೇಕು. ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ತಾರತಮ್ಯ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.
ಪ್ರೊ.ಬಿ.ಕೃಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಸಂಸ್ಥೆಯಿಂದ ಬೀದಿನಾಟಕ ಮತ್ತು ಜಾನಪದ ಗೀತೆಗಳ ಗಾಯನದ ಮೂಲಕ ಅಸ್ಪಶ್ಯತೆ ನಿವಾರಣೆ ಕುರಿತು ಜಾಗೃತಿ ಮೂಡಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಮಲ್ಲಪ್ಪ ಬಿರಾದಾರ, ಮುಖಂಡರಾದ ಸೂಚಪ್ಪ ದೇವರಮನಿ, ಹನುಮಂತ ಪೂಜಾರಿ, ಮುತ್ತಣ್ಣ ಭಜಂತ್ರಿ, ನೀಲಕಂಠಪ್ಪ ಪೂಜಾರ, ಯಲ್ಲಪ್ಪ ಇಟಗಿ, ವೆಂಕಟೇಶ ಹೊಸಮನಿ ಇತರರಿದ್ದರು.