

ಹನುಮಸಾಗರ: ರಾವಣನಂತಹ ದುಷ್ಟ ಗುಣಗಳನ್ನು ಸುಟ್ಟ ಹಾಕಿ ರಾಮನ ಹಾಗೆ ಸತ್ಯ, ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ದಸರಾ ಹಬ್ಬದ ಮೂಲ ಉದ್ದೇಶ ಎಂದು ಪ್ರವಚನಕಾರ ಏಕನಾಥ ಮೆದಿಕೇರಿ ಹೇಳಿದರು.
ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಪುರಾಣ ಮಂಗಲೋತ್ಸವದಲ್ಲಿ ಮಾತನಾಡಿದರು. ಅಜ್ಞಾನ, ಅಹಂಕಾರ, ಕ್ರೌರ್ಯ, ಅನ್ಯಾಯ ಅಸುರ ಸ್ವಭಾವಗಳ ಮೇಲೆ ಸತ್ಯ, ಧರ್ಮ, ಜ್ಞಾನ, ಶಾಂತಿ, ಧೈರ್ಯಗಳ ವಿಜಯದ ಸಂಕೇತವೇ ವಿಜಯದಶಮಿ.
ದೇವಿಯ ಆರಾಧನೆ ಮೂಲಕ ಮನಸ್ಸಿನಲ್ಲಿ ಶಕ್ತಿ, ಶಾಂತಿ, ಜ್ಞಾನ ಹಾಗೂ ಧೈರ್ಯ ಬೆಳಸಿಕೊಳ್ಳುವುದೇ ನವರಾತ್ರಿ. ದೇವಿಗೆ ಶರಣಾದರೆ ಜೀವನದಲ್ಲಿನ ಎಲ್ಲ ಅಡಚಣೆಗಳು ನಿವಾರಣೆಯಾಗುತ್ತವೆ. ಪ್ರತಿಯೊಬ್ಬರು ಪುರಾಣ ಕೇಳಬೇಕು. ಇದರಿಂದ ಇತಿಹಾಸ ತಿಳಿವುದರ ಜತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಎಸ್‌ಎಸ್‌ಕೆ ಸಮುದಾಯದ ಸ್ಥಳೀಯ ಅಧ್ಯಕ್ಷ ಭಗೀರಥಸಾ ಪಾಟೀಲ, ಮಾಜಿ ಅಧ್ಯಕ್ಷ ಮಾರುತಿಸಾ ರಂಗ್ರೇಜ, ತಬಲಾ ವಾದಕ ಶಂಕರ ಬಸೂದೆ, ಹಾರ್ಮೋನಿಯಂ ವಾದಕ ವಿನೋದ ಪಾಟೀಲ್, ತರುಣ ಸಂಘ ಹಾಗೂ ಮಹಿಳಾ ಮಂಡಳದ ಸದಸ್ಯರಿದ್ದರು.