

ಸಾಸ್ವೆಹಳ್ಳಿ: ಮಳೆಗಾಗಿ ಪ್ರಾರ್ಥಿಸಿ ಹೋಬಳಿಯ ಹನುಮನಹಳ್ಳಿ ಸಮೀಪ ಬೆಟ್ಟದಲ್ಲಿ ನೆಲೆಸಿರುವ ಕುರದ ಬಸವೇಶ್ವರ ಸ್ವಾಮಿಗೆ ಮೂರು ವಾರಗಳಿಂದ ಗ್ರಾಮಸ್ಥರು ಕೈಗೊಂಡಿದ್ದ ವೃತವು ಸೋಮವಾರ ಪರವು (ಅನ್ನಸಂತರ್ಪಣೆ) ಮೂಲಕ ಸಂಪನ್ನವಾಯಿತು.
ಬಿತ್ತನೆ ಮಾಡಲು ಬೀಜ, ಗೊಬ್ಬರ ತಂದಿಟ್ಟುಕೊಂಡಿದ್ದ ರೈತರಿಗೆ ಮುಂಗಾರು ಬಾರದ ಕಾರಣ ಆತಂಕ ಸೃಷ್ಟಿಯಾಗಿತ್ತು. ಇದೀಗ ಅವರು ಗ್ರಾಮೀಣ ಭಾಗದ ಜನರು ದೈವಿಶಕ್ತಿಗಳ ಮೊರೆ ಹೋಗುತ್ತಿದ್ದಾರೆ.
ಹನುಮನಹಳ್ಳಿ ಗ್ರಾಮಸ್ಥರು ಕಳೆದ ಮೂರು ವಾರಗಳಿಂದ ಕೈಗೊಂಡಿದ್ದ ವೃತ ಸೋಮವಾರ ಪರವುನೊಂದಿಗೆ ಸಂಪನ್ನವಾಗುತ್ತಿದ್ದಂತೆಯೇ ಮಳೆ ಸುರಿದಿದ್ದು ಮಂಗಳವಾರ ಸಂಜೆಯೂ ಮುಂದುವರೆದಿತ್ತು.
ಭಾನುವಾರ ಸಂಜೆ ಗ್ರಾಮಸ್ಥರು ಗ್ರಾಮದ ಮನೆ ಮನೆಗಳಿಗೆ ತೆರಳಿ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ತರಕಾರಿಗಳನ್ನು ಸಂಗ್ರಹಿಸಿದರು. ಬಳಿಕ ಸೋಮವಾರ ಬೆಳಿಗ್ಗೆ ಬೆಟ್ಟದ ಮೇಲಿನ ದೇವಾಲಯಕ್ಕೆ ತೆರಳಿ ಕುರದ ಬಸವೇಶ್ವರ ಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಿ ಅಡುಗೆ ತಯಾರಿಸಿ ಪರವು (ಅನ್ನ ಸಂತರ್ಪಣೆ) ಏರ್ಪಡಿಸಿದರು.
ಗ್ರಾಮದ ಬಸವೇಶ್ವರ ಸ್ವಾಮಿ, ಬೇಟೆ ರಂಗಪ್ಪ ದೇವರ ಉತ್ಸವ ಮೂರ್ತಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಗ್ರಾಮದ ಮಹಿಳೆಯರು ಮಕ್ಕಳಾದಿಯಾಗಿ ಹಿರಿಯರು ಪಾಲ್ಗೊಂಡಿದ್ದರು.