ಸಿಸಿ ಕ್ಯಾಮರಾ ಕಿತ್ತು ಹಾಕಿದ ಕಿಡಿಗೇಡಿಗಳು: ಹನುಮನಾಳ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಘಟನೆ

130922 Hanumanala CC TV Damage
ಹನುಮನಾಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಮಾರ್ಟ್ ಕ್ಲಾಸ್‌ನ ಸಿಸಿ ಕ್ಯಾಮರಾಗಳು ಕೆಳಗೆ ಬಿದ್ದಿರುವುದು.
Published on

ಹನುಮಸಾಗರ: ಹನುಮನಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಮಾರ್ಟ್‌ಕ್ಲಾಸ್ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ದುಷ್ಕರ್ಮಿಗಳು ಕಿತ್ತು ಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಕಿಡಿಗೇಡಿಗಳು ಎರಡು ಸಿಸಿ ಕ್ಯಾಮರಾಗಳನ್ನು ಕಿತ್ತು ಅಲ್ಲಿಯೇ ಬಿಸಾಕಿದ್ದಾರೆ. ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ತರಗತಿಗೆ ಬಂದಾಗ ಸಿಸಿ ಕ್ಯಾಮರಾ ಬಿದ್ದಿರುವುದನ್ನು ಕಂಡು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಶಾಲಾ ಆವರಣದಲ್ಲಿ ನಡೆಸುವ ಅಕ್ರಮ ಚಟುವಟಿಕೆಗಳನ್ನು ಸಿಸಿ ಕ್ಯಾಮರಾ ಸೆರೆ ಹಿಡಿಯುತ್ತವೆ ಎಂದು ಹಾಳು ಮಾಡಿರಬಹುದು ಎನ್ನಲಾಗಿದೆ. 15 ದಿನಗಳ ಹಿಂದೆ ಇದೆ ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸ್ಮಾರ್ಟ್‌ಕ್ಲಾಸ್‌ನ ಬಾಗಿಲು ಮುರಿದು ಅಲ್ಲಿ ಅಳವಡಿಸಿದ್ದ ಸ್ಪೀಕರ್‌ಗಳನ್ನು ಕದ್ದೊಯ್ದಿದ್ದರು. ಭಾನುವಾರ ರಾತ್ರಿ ಸಿಸಿ ಕ್ಯಾಮರಾಗಳನ್ನು ಕಿತ್ತು ಹಾಳು ಮಾಡಿದ್ದಾರೆ. ಕೆಲ ತಾಂತ್ರಿಕ ಕಾರಣಗಿಳಿಂದಾಗಿ ಕಳೆದ ಮೂರು ದಿನಗಳಿಂದ ಸಿಸಿ ಕ್ಯಾಮರಾಗಳು ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ಕುರಿತು ಸಿಆರ್‌ಪಿ ಶರಣಗೌಡ ಗೌಡ್ರ ಮತ್ತು ಮುಖ್ಯ ಶಿಕ್ಷಕ ಹನಮಂತಪ್ಪ ಮಾಲಗಿತ್ತಿ, ಹನುಮಸಾಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಸಿ ಕ್ಯಾಮರಾ ಕಿತ್ತು ಹಾಕಿದವರ ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಮನವಿ ಪತ್ರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net