

ಭಟ್ಕಳ: ಭಾರತ ದೇಶ ಯುದ್ಧದ ಸನ್ನಿವೇಶದಲ್ಲಿದೆ. ಯುದ್ಧ ನಡೆದರೆ ಏನಾಗುತ್ತದೆಯೋ ಎನ್ನುವ ಭಯ ಎಲ್ಲರನ್ನೂ ಕಾಡುತ್ತಿದೆ. ಇಂತಹ ಸಮಯದಲ್ಲಿ ಪಟ್ಟಣದಲ್ಲಿ ಅಭಯಮುದ್ರಾ ಹನುಮಂತನ ಪ್ರತಿಷ್ಠೆ ಆಗಿದೆ. ಅಭಯ ಮುದ್ರಾ ಎಂದರೆ ನಾನಿದ್ದೇನೆ ಭಯ ಪಡುವುದು ಬೇಡಾ ಎಂದರ್ಥವಾಗಿದೆ. ಯುದ್ಧದ ಸನ್ನಿವೇಶದಲ್ಲಿ ಹನುಮಂತ ಪೀಠ ಏರಿ ಇಡೀ ಪ್ರಪಂಚಕ್ಕೆ ಅಭಯ ನೀಡಿದ್ದಾನೆ ಎಂದು ಹೊಸನಗರ ರಾಮಚಂದ್ರಾಪುರ ಶ್ರೀ ಮಹಾಸಂಸ್ಥಾನ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಮಣ್ಕುಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಹನುಮಂತ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ 41 ಅಡಿ ಎತ್ತರದ ಹನುಮಂತನ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಸಂಖ್ಯೆ ಮುಖ್ಯವಾಗಿರುವುದಿಲ್ಲ. ಬದಲಾಗಿ ಯೋಗ್ಯತೆ ಮುಖ್ಯವಾಗಿರುತ್ತದೆ. ಸಣ್ಣ ಸಂಖ್ಯೆಯ ಗಾಣಿಗ ಸಮಾಜ ಇಷ್ಟು ದೊಡ್ಡ ಹನುಮಂತ ದೇಗುಲ ನಿರ್ವಿುಸಿ ಹನುಮಂತನ ಕೃಪೆಗೆ ಪ್ರಾತರಾಗಿರುವುದು ಅಭಿನಂದನಾರ್ಹ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಸದಾ ಜನರ ಬೆಂಬಲವಿರುತ್ತದೆ. ದೇವರು ಕೂಡ ಒಳ್ಳೆಯ ಕೆಲಸ ಮಾಡುವವರ ಬೆನ್ನಿಗೆ ನಿಂತು ಆಶೀರ್ವದಿಸುತ್ತಾನೆ ಎಂದರು.
ಭಟ್ಕಳದಲ್ಲಿ ಚೆನ್ನಾ ಭೈರಾದೇವಿಯು ಅಷ್ಟದಿಕ್ಕುಗಳಲ್ಲಿ ಹನುಮಂತನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು ಎನ್ನುವ ಇತಿಹಾಸ ಇದೆ. ಈಶಾನ್ಯ ದಿಕ್ಕಿನಲ್ಲಿ ಮಣ್ಕುಳಿ ಹನುಮಂತನನ್ನು ಅಭಯ ಮುದ್ರಾದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈಶಾನ್ಯ ದಿಕ್ಕು ಶೇಷ್ಠವಾದ ದಿಕ್ಕಾಗಿದೆ. ಈ ಮೂರ್ತಿಯ ಮುಂದೆ ನಿಂತು ಪ್ರಾರ್ಥಿಸಿದರೆ ಎಲ್ಲರ ಕಷ್ಟ ಕಳೆಯುತ್ತಾನೆ ಎಂದರು.
ಮಣ್ಕುಳಿ ಶ್ರೀ ಹನುಮಂತ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ ಶೆಟ್ಟಿ ಮಾತನಾಡಿದರು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಪಾದಪೂಜೆ ನೆರವೇರಿಸಲಾಯಿತು. ಗಾಣಿಗ ಸಮಾಜದ ಪ್ರಮುಖರಾದ ಆನಂದ ಶೆಟ್ಟಿ, ರಾಮದಾಸ ಶೆಟ್ಟಿ, ಶಿವರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಮಹೇಶ ಶೆಟ್ಟಿ, ಸುಬ್ರಮಣ್ಯ ಶೆಟ್ಟಿ ಇತರರು ವೇದಿಕೆಯಲ್ಲಿದ್ದರು.