ಹನುಮಂತ ಎಲ್ಲರ ಕಷ್ಟ ದೂರ ಮಾಡುತ್ತಾನೆ

15
Published on

ಮೈಸೂರು: ಕಲಿಯುಗದಲ್ಲಿ ಕಾಡುತ್ತಿರುವ ಎಲ್ಲ ಬಗೆಯ ಕಷ್ಟವನ್ನು ನಾಶ ಮಾಡಲೆಂದೇ ಶ್ರೀ ಆಂಜನೇಯಸ್ವಾಮಿ ಅವತರಿಸಿ ಬರುತ್ತಾರೆಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭವಿಷ್ಯ ನುಡಿದರು.
ಹನುಮ ಜಯಂತಿ ಪ್ರಯುಕ್ತ ಅವಧೂತ ದತ್ತಪೀಠದ ಆವರಣದಲ್ಲಿರುವ ಶ್ರೀ ಕಾರ್ಯಸಿದ್ದಿ ಹನುಮಾನ್ ಮಂದಿರದಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಭಕ್ತರಿಗೆ ಆಶೀರ್ವಚನ ನೀಡಿದರು.


ರಾಮಾಯಣ ಕಾಲದಲ್ಲಿ ಶ್ರೀರಾಮ, ಸೀತಾಮಾತೆಯ ಕಷ್ಟಗಳನ್ನೇ ದೂರ ಮಾಡಿದ ಹನುಮಂತ ಸಾಮಾನ್ಯ ಮನುಜರ ದುಃಖ ದೂರ ಮಾಡಲಾರನೇ? ಭಕ್ತಿಯಿಂದ ಪೂಜಿಸಿ, ಆರಾಧಿಸಿ, ಪ್ರಾರ್ಥಿಸಿದರೆ ಖಂಡಿತವಾಗಿಯೂ ಎಲ್ಲರ ಕಷ್ಟಗಳನ್ನು ದೂರ ಮಾಡುತ್ತಾನೆ ಎಂದು ತಿಳಿಸಿದರು.
ಹನುಮನ್ ಜನ್ಮಸ್ಥಳದ ಬಗ್ಗೆ ಗೊಂದಲಗಳಿವೆ. ಕೆಲವರು ಅಂಜನಾದ್ರಿ ಎನ್ನುತ್ತಾರೆ. ಇನ್ಯಾರೋ ಇನ್ನೊಂದು ಸ್ಥಳ ಹೇಳುತ್ತಾರೆ. ಅವನ ಹುಟ್ಟಿದ ಸ್ಥಳ ಎಲ್ಲಾದರೂ ಆಗಿರಲಿ. ಅವನನ್ನು ನಂಬಿ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ ಎಂದು ಸಲಹೆ ನೀಡಿದರು.
ನಮ್ಮ ಮಠದ ಆವರಣದಲ್ಲಿ 25 ವರ್ಷಗಳಿಂದ ಬಯಲು ಆಂಜನೇಯನಿಗೆ ಪೂಜೆ ಮಾಡಲಾಗುತ್ತಿತ್ತು. ಇದೀಗ 10 ವರ್ಷಗಳಿಂದ ಮಂದಿರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿ ಮೂರು ಆಂಜನೇಯ ಮೂರ್ತಿಗಳಿವೆ ಎಂದರು.

ರಾಮ-ರಾವಣರ ಯುದ್ಧ ನಡೆಯುತ್ತಿದ್ದಾಗ ರಾಮ ಮತ್ತು ಲಕ್ಷ್ಮಣನನ್ನು ಮಾಯೆಯಿಂದ ಅಪಹರಿಸಲಾಯಿತು. ಈ ವಿಷಯ ತಿಳಿದ ರಾಮಭಕ್ತ ಹನುಮ, ಪಾತಾಳದಲ್ಲಿ ರಾವಣನ ಸಹೋದರನನ್ನು ಕೊಂದು ರಾಮ-ಲಕ್ಷ್ಮಣರನ್ನು ರಕ್ಷಿಸಿ ಕರೆತರುತ್ತಾನೆ. ಹೀಗೆ ದೇವರಾದ ರಾಮನ ಕಷ್ಟ ನಿವಾನರಿಸಿ ಸೀತಾಮಾತೆಯ ದುಃಖ ದೂರ ಮಾಡಿದ ಹನುಮ ನಮ್ಮ ತೊಂದರೆಗಳನ್ನೂ ದೂರ ಮಾಡುತ್ತಾನೆ. ಅವನನ್ನು ನಂಬಿ ಪೂಜೆ ಮಾಡಿ ಎಂದು ಸಲಹೆ ನೀಡಿದರು.
ಹನುಮ ಜಯಂತಿ ಸಡಗರ: ಹನುಮ ಜಯಂತಿ ಪ್ರಯುಕ್ತ ಆಶ್ರಮದ ಆವರಣದಲ್ಲಿರುವ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು ಮಾವಿನ ತೋರಣ, ಬಾಳೆಕಂದು ಹಾಗೂ ಪುಷ್ಪಮಾಲೆಗಳಿಂದ ಅಲಂಕರಿಸಲಾಗಿತ್ತು.
ಸ್ವಾಮಿಗೆ ಮುಂಜಾನೆಯಿಂದ ವಿವಿಧ ಅಭಿಷೇಕ, ಪೂಜಾಕಾರ್ಯಗಳು ನೆರವೇರಿದವು. ಹನುಮ ಮೂರ್ತಿಯನ್ನು ಬಾಳೆ ಹಣ್ಣಿನಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net