

ಹುಣಸೂರು: ಡಿ.13ರಿಂದ 15ರವರೆಗೆ ಆಯೋಜಿಸಿರುವ ಹನುಮ ಜಯಂತ್ಯುತ್ಸವವನ್ನು ಜಿಲ್ಲಾಡಳಿತ ನೀಡಿರುವ ನಿರ್ದೇಶನದಂತೆ ಕಾನೂನು ಪರಿಪಾಲನೆಯೊಂದಿಗೆ ನಡೆಸಲು ಸಮ್ಮತಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ವಿಜಯಕುಮಾರ್ ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹನುಮ ಜಯಂತ್ಯುತ್ಸವ ಕುರಿತು ಸರ್ವಧರ್ಮಗಳ ಮುಖಂಡರೊಂದಿಗೆ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ವರ್ಷದಲ್ಲಿ ಜಿಲ್ಲಾಡಳಿತ ಸೂಚಿಸಿದ್ದ ಮಾರ್ಗಸೂಚಿಗಳೇ ಈ ಬಾರಿಯೂ ಅನ್ವಯವಾಗಲಿದೆ ಎಂದು ತಿಳಿಸಿದರು.
ಎರಡೂ ಸಮುದಾಯಗಳ ಮುಖಂಡರು ತಮ್ಮ ತಮ್ಮ ಯುವಸಮೂಹವನ್ನು ನಿಯಂತ್ರಣದಲ್ಲಿಡಬೇಕು. ಉತ್ಸವ ಶಾಂತಿಯುತವಾಗಿ ನಡೆಯುವಂತೆ ಕ್ರಮವಹಿಸಬೇಕು. ಬಂಟಿಂಗ್ಸ್, ಬಾವುಟಗಳನ್ನು ಅಳವಡಿಸುವುದರಿಂದ ಆರಂಭಗೊಂಡು ಡಿ.15ರ ಹನುಮ ಮೆರವಣಿಗೆಯಲ್ಲಿ ಪಾಲಿಸಬೇಕಾದ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವುದು ಅಗತ್ಯ. ಪರವಾನಗಿ ನೀಡಲು ಏಕಗವಾಕ್ಷಿ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು. ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಎಚ್ಚರವಹಿಸುವುದು ಅಗತ್ಯ. ಮೆರವಣಿಗೆ ದಿನ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮ ವಿವರ: ಹನುಮಂತ್ಯುತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್ ಮಾತನಾಡಿ, ಡಿ.13ರಂದು ಬೆಳಗ್ಗೆ ನಗರದ ಆಂಜನೇಯಸ್ವಾಮಿ ದೇಗುಲದಲ್ಲಿ ಪಂಚಲೋಹದ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಸಹಿತ ವಿಗ್ರಹ, ಆಂಜನೇಯಸ್ವಾಮಿಯ ಭವ್ಯ ವಿಗ್ರಹವನ್ನು ವಿಶೇಷ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಮೇಘಾಲಯ ರಾಜ್ಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಸಂಜೆ ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.14ರಂದು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಡಿ.15ರಂದು ಬೆಗ್ಗೆ ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ತಾಲೂಕಿನ ವಿವಿಧ ಮಠಗಳ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮತ್ತು ವಿವಿಧ ರಾಜಕೀಯ ಪಕ್ಷಗಳ ನೇತಾರರ ಸಮ್ಮುಖದಲ್ಲಿ ಆಂಜನೇಯಸ್ವಾಮಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಡಳಿತದ ನಿರ್ದೇಶನದಂತೆ ಕಲ್ಕುಣಿಕೆ ಬಡಾವಣೆಯಿಂದ ಹೊರಟು ಶಬರಿ ಪ್ರಸಾದ್ ವೃತ್ತ ಹಾದು, ಹಳೇ ಸೇತುವೆ ಮೂಲಕ ಸಂವಿಧಾನ ವೃತ್ತ, ಎಸ್.ಜೆ.ರಸ್ತೆ, ಎಚ್.ಡಿ.ಕೋಟೆ ವೃತ್ತ, ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣದ ರಸ್ತೆ ಮೂಲಕ ಆಂಜನೇಯಸ್ವಾಮಿ ದೇಗುಲವನ್ನು ತಲುಪಲಾಗುವುದು ಎಂದರು.
ಡಿವೈಎಸ್‌ಪಿ ಗೋಪಾಲಕೃಷ್ಣ ಮಾತನಾಡಿ, ಕಾನೂನು ಪರಿಪಾಲನೆ ಮಾಡುವತ್ತ ಎಲ್ಲರೂ ನಿಗಾವಹಿಸಬೇಕು. ಬ್ಯಾನರ್‌ಗಳನ್ನು ಅಳವಡಿಸಲು ಸಮಿತಿಯು ಡಿ.11ರ ಸಂಜೆಯಿಂದ ಅವಕಾಶ ನೀಡಲು ಕೋರಿದ್ದು, ಈ ಕುರಿತು ಹಿರಿಯ ಅದಿಕಾರಿಗಳೊಂದಿಗೆ ಚರ್ಚಿಸಿ ತಿಳಿಸಲಾಗುವುದು. ಮಾರ್ಗಗಳ ಪಾಲನೆ, ಕಿಡಿಗೇಡಿಗಳಿಗೆ ಅವಕಾಶವಿಲ್ಲದಂತೆ ಎಲ್ಲರೂ ಎಚ್ಚರವಹಿಸಿರಿ. ಸ್ವಯಂಸೇವಕರು ಮೆರವಣಿಗೆ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಪಟ್ಟಣದ ಶ್ರೀರಾಮಮಂದಿರಗಳಲ್ಲಿ ಅಲಂಕಾರ ಮಾಡಿಕೊಳ್ಳಲು ಅಭ್ಯಂತರವಿಲ್ಲವೆಂದು ತಾಲೂಕು ಆಡಳಿತ ತಿಳಿಸಿದೆ. ಮೆರವಣಿಗೆಯಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹಿಂದು ಮತ್ತು ಮುಸ್ಲಿಂ ಸಮಾಜದ ಎಲ್ಲ ಹಿರಿಯರೂ ತಮ್ಮ ಯುವ ಸಮೂಹವನ್ನು ನಿಯಂತ್ರಣದಲ್ಲಿರಿಸಿ ಅವರಿಗೆ ತಿಳಿಹೇಳಿ ಮೆರವಣಿಗೆ ಸಾಂಗವಾಗಿ ನೆರವೇರುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಎಚ್.ವೈ.ಮಹದೇವ್, ಚಂದ್ರಶೇಖರ್, ಮುಖಂಡರಾದ ಇಂಟೆಕ್ ರಾಜು, ಸುನಿಲ್ ಮಾತನಾಡಿದರು. ಮುಸ್ಲಿಂ ಮುಖಂಡರಾದ ಮಜಾಜ್, ಫಜಲ್‌ವುಲ್ಲಾ, ಸರ್ದಾರ್ ಇತರರು ಮೆರವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಪೌರಾಯುಕ್ತೆ ಕೆ.ಮಾನಸಾ, ಶ್ರೀ ಅಂಜನಾದ್ರಿ ಟ್ರಸ್ಟ್, ಹಿಂದುಪರ ಸಂಘಟನೆಗಳ ಮುಖಂಡರಾದ ಸಚ್ಚಿನ್ ಬಾಗಲ್, ಅಪ್ಪಣ್ಣ, ವರದರಾಜ ಪಿಳ್ಳೆ, ಅನಿಲ್, ನಗರಸಭಾ ಸದಸ್ಯ ವಿವೇಕಾನಂದ ಇತರರಿದ್ದರು.