ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ಇಂದು

HUN-DEC-14-2(POLICE FORCE IN HUNSUR)
ಹುಣಸೂರಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಪೊಲೀಸರು ಜಮಾಯಿಸಿ ಹನುಮ ಜಯಂತಿ ಅಂಗವಾಗಿ ಭದ್ರತಾ ವ್ಯವಸ್ಥೆ ಕರ್ತವ್ಯ ನಿರ್ವಹಿಸಲು ತಮ್ಮ ರೂಟ್‌ಗಳ ಮಾಹಿತಿ ಪಡೆದುಕೊಂಡರು.
Published on

ಹುಣಸೂರು: ಡಿ.15ರಂದು ಆಯೋಜಿಸಿರುವ 30ನೇ ವರ್ಷದ ಹನುಮ ಜಯಂತಿ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 1400ಕ್ಕೂ ಹೆಚ್ಚು ವಿವಿಧ ಹಂತದ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸುತ್ತಾರೆ. ಮೆರವಣಿಗೆ ಸಾಗಿ ಬರುವ ದಾರಿಯಲ್ಲಿ 6 ಡಿವೈಎಸ್‌ಪಿ, 12 ಇನ್‌ಸ್ಪೆಕ್ಟರ್, 42 ಸಬ್‌ಇನ್‌ಸ್ಪೆಕ್ಟರ್, 49 ಎಎಸ್‌ಐ, 900 ಕಾನ್‌ಸ್ಟೆಬಲ್ ಮತ್ತು ಕೆಎಸ್‌ಆರ್‌ಪಿಯ 10 ತುಕಡಿಗಳು, ಡಿಐಆರ್‌ನ 7 ತುಕಡಿಗಳು ಶಾಂತಿಗೆ ಭಂಗ ಬಾರದಂತೆ ಕರ್ತವ್ಯ ನಿರ್ವಹಿಸಲಿವೆ.

ಪಟ್ಟಣದ 250ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೆರವಣಿಗೆ ಸಾಗಿ ಬರುವ ದಾರಿಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಬಂಟಿಂಗ್ಸ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದ್ದು, ಬ್ಯಾನರ್‌ಗಳಲ್ಲಿ ಹನುಮನನ್ನು ಹೊರತುಪಡಿಸಿ ಇನ್ನಿತರ ಮಹನೀಯರ ಅಥವಾ ವ್ಯಕ್ತಿಗಳ ಭಾವಚಿತ್ರ ಅಳವಡಿಸಿರುವುದನ್ನು ತೆರವುಗೊಳಿಸಲಾಗಿದೆ.

ಬೆಳಗ್ಗೆ 11 ಗಂಟೆಗೆ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಹನುಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭವಾಗುವ ಮೆರವಣಿಗೆ ಸಂಜೆ 6 ಗಂಟೆಯೊಳಗೆ 5 ಕಿ.ಮೀ. ದೂರ ಸಾಗಿ ಆಂಜನೇಯಸ್ವಾಮಿ ದೇವಾಲಯದ ಆವರಣ ತಲುಪಲಿದೆ. ದಾರಿಯದ್ದಕ್ಕೂ 10ಕ್ಕೂ ಹೆಚ್ಚು ಕಡೆ ಹನುಮ ಭಕ್ತರಿಗಾಗಿ ವಿವಿಧ ಸಂಘ, ಸಂಸ್ಥೆಗಳು, ಯುವಕರ ಪಡೆ ಮಜ್ಜಿಗೆ, ಪಾನಕ, ವೆಜ್ ಬಾತ್, ಮೊಸರನ್ನ ಮುಂತಾದ ಉಪಾಹಾರಗಳನ್ನು ಒದಗಿಸಲು ಸಜ್ಜಾಗುತ್ತಿವೆ. ನಗರದ ಗೋಕುಲ ರಸ್ತೆ ಕೇಸರಿ ಬಾವುಟ ಮತ್ತು ಬಣ್ಣಬಣ್ಣದ ದೀಪಾಲಂಕಾರಗಳಿಂದ ಕಂಗೊಳಿಸಿ ಎಲ್ಲರ ಗಮನಸೆಳೆಯುತ್ತಿದೆ.

ನಾವಿದ್ದೇವೆ ಧೈರ್ಯವಾಗಿರಿ: ಹುಣಸೂರಿನ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಪಡೆಯಿಂದ ಪಥ ಸಂಚಲನ ನಡೆಸಲಾಯಿತು. ಕಮ್ಯಾಂಡೋ ಮೊಬೈಲ್ ವಾಹನದೊಂದಿಗೆ ಕೆಎಸ್‌ಆರ್‌ಪಿ ಮತ್ತು ಡಿಎಆರ್ ತಂಡದ ತುಕಡಿಗಳು ಶಿಸ್ತುಬದ್ಧ ಪಥಸಂಚಲನ ನಡೆಸಿ ನಾಗರಿಕರಿಗೆ ಧೈರ್ಯ ತುಂಬುವ ಕಾರ್ಯ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net