ಸಕ್ಕರೆನಾಡಲ್ಲಿ ಹನುಮನ ಸ್ಮರಣೆ: ಜಿಲ್ಲಾದ್ಯಂತ ಜಯಂತಿ ಆಚರಣೆ

05_12_Mdy_05(Hanuma Jayanthi)
Published on

ಮಂಡ್ಯ: ಜಿಲ್ಲಾದ್ಯಂತ ಹನುಮ ಜಯಂತಿಯನ್ನು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಹನುಮ ಜಯಂತಿ ಅಂಗವಾಗಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳು, ಅನ್ನದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿತು. ನಗರದ ಕಸ್ತೂರಿಬಾ ಉದ್ಯಾನದಲ್ಲಿರುವ ವೀರಾಂಜನೇಯಸ್ವಾಮಿ, ಕಲ್ಲಹಳ್ಳಿ ಬಡಾವಣೆಯಲ್ಲಿರುವ ಆಂಜನೇಯಸ್ವಾಮಿ, ಚಾಮುಂಡೇಶ್ವರಿನಗರದಲ್ಲಿರುವ ಅಭಯ ಆಂಜನೇಯಸ್ವಾಮಿ, ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ, ತಾಲೂಕಿನ ಹೊಳಲು ಗ್ರಾಮದ ಆಂಜನೇಯ ಯುವಕರ ಬಳಗದ ವತಿಯಿಂದ ಆಂಜನೇಯ ವೃತ್ತದಲ್ಲಿ 17ನೇ ವರ್ಷದ ಹನುಮ ಜಯಂತಿಯನ್ನು ಆಚರಿಸಲಾಯಿತು.
ಭಾನುವಾರವೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಏರ್ಪಡಿಸಲಾಗಿತ್ತು. ಸೋಮವಾರ ಮುಂಜಾನೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿಭಾವ ಪ್ರದರ್ಶಿಸಿದರು. ಬಳಿಕ ಅನ್ನದಾಸೋಹದಲ್ಲಿ ಭಾಗಿಯಾದರು. ಕೆಲವೆಡೆ ದೇವರ ವಿಗ್ರಹಗಳಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಮಾತ್ರವಲ್ಲದೆ ದೇವಾಲಯ, ಆವರಣ, ಸುತ್ತಮುತ್ತಲ ಪರಿಸರ ಮತ್ತು ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಬೇಲೂರಿನಲ್ಲಿ ಆಚರಣೆ: ಶ್ರೀರಂಗಪಟ್ಟಣ ತಾಲೂಕಿನ ಬೇಲೂರು ಗ್ರಾಮದಲ್ಲಿ ಹನುಮ ಜಯಂತಿ ಆಚರಣೆ ಮಾಡಲಾಯಿತು.
ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ದೇವರ ದರ್ಶನ ಪಡೆದರು. ಇದಕ್ಕೂ ಮುನ್ನ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಅಂತೆಯೆ, ಮಸಣಮ್ಮ ದೇವಾಲಯಕ್ಕೆ ಭೇಟಿ ನೀಡಿದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿದರು. ಬಳಿಕ ಗ್ರಾಮದ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಿದರು.
ಗ್ರಾಮದ ಮಾಯಿಗಯ್ಯ, ಸಂಜು, ಸತೀಶ್‌ಚಂದ್ರ, ಮರಕಾಡುದೊಡ್ಡಿ ಆನಂದ್, ಬಿ.ಯರಹಳ್ಳಿ ಪ್ರಕಾಶ್, ಕಬ್ಬನಹಳ್ಳಿ ರಾಮಚಂದ್ರು, ಚನ್ನಪ್ಪನದೊಡ್ಡಿ ಶಿವಣ್ಣ, ಸೀನಪ್ಪ, ಸರ್ವೇಶ್, ಪುಟ್ಟಸ್ವಾಮಿ, ಕುಳ್ಳ ಚನ್ನಪ್ಪ, ಕುಶ, ಬೊಮ್ಮೇಶ್, ವಿನೋದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net